(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 28. ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿ ವಾಸವಿದ್ದ ಮಹಿಳೆಯೋರ್ವರ ಮನೆಯನ್ನು ಪಕ್ಕದ ಮನೆ ನಿವಾಸಿ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ವರದಿಯ ಪ್ರಕಾರ, ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಸರ್ವೇ ನಂಬ್ರ 406/1 ರ ಸರಕಾರಿ ಸ್ಥಳದಲ್ಲಿ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎಂಬವರು ಮನೆ ನಿರ್ಮಿಸಿಕೊಂಡು ವಾಸವಿದ್ದು, ಈ ಮನೆಯನ್ನು ಸ್ಥಳೀಯ ನಿವಾಸಿ ರಫೀಕ್ ಎಂಬಾತ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದಿರುವುದಾಗಿದೆ. ಅಲ್ಲದೇ ಇದರ ವಿಡಿಯೋ ಮಾಡಿದ ಬಾಲಕಿಗೆ ಈತ ಬೆದರಿಕೆ ಹಾಕಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದ ರಾಜೀವಿಯರವರು. ಫೆ.27ರಂದು ಬೆಳಗ್ಗೆ ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ರಫೀಕ್ ಎಂಬಾತ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ನಾಶಪಡಿಸಿ ಅಲ್ಲದೇ ಮನೆಯಲ್ಲಿದ್ದ ಟಿ.ವಿ., ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನುಗಳನ್ನು ಮನೆಯಿಂದ ತೆಗೆದು ಬೀದಿಗೆ ಎಸೆದಿದ್ದಾನೆ ಎಂದು ದೂರಲಾಗಿದ್ದು, ಈ ಕೃತ್ಯವನ್ನು ಅವರ ಮಗಳು ವಿಡಿಯೋ ರೆಕಾರ್ಡಿಂಗ್ ಮಾಡಲು ಹೋದಾಗ ಬೆದರಿಕೆ ಒಡ್ಡಿದ್ದಾನೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.








