(ನ್ಯೂಸ್ ಕಡಬ) newskadaba.com, ಡಿ.05 : ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ವೃದ್ಧ ದಂಪತಿಯನ್ನು ಗುರಿಯಾಗಿಸಿ ನಡೆದ ಭೀಕರ ‘ಡಿಜಿಟಲ್ ಅರೆಸ್ಟ್’ (Digital Arrest) ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ವಂಚನೆಯಲ್ಲಿ ದಂಪತಿಗಳ 84 ಲಕ್ಷ ರೂ. ಮೊತ್ತದ ಹಣವನ್ನು ಕದಿಯಲು ಯತ್ನಿಸಲಾಗಿತ್ತು. ಆದರೆ, ದಂಪತಿಯ ಬ್ಯಾಂಕ್ ಮ್ಯಾನೇಜರ್ ಅವರ ಸಮಯಪ್ರಜ್ಞೆ ಮತ್ತು ತಕ್ಷಣದ ಕ್ರಮದಿಂದಾಗಿ ಬೃಹತ್ ವಂಚನೆಯು ತಪ್ಪಿದ್ದು, ಮಂಗಳೂರು ಗ್ರಾಮಾಂತರ ಭಾಗದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದೆ. ಡಿ. 1ರ ಸಂಜೆ, ವಂಚಕರ ತಂಡವೊಂದು ಕಿನ್ನಿಗೋಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗೆ ಕರೆ ಮಾಡಿ, ತಮ್ಮನ್ನು ‘ಡಿಜಿಟಲ್ ಅರೆಸ್ಟ್’ ಮಾಡಲಾಗಿದೆ ಎಂದು ಬೆದರಿಸಿತ್ತು.
ವಂಚಕರು ದಂಪತಿಗೆ ಹಣ ನೀಡುವಂತೆ ಬೇಡಿಕೆ ಇಟ್ಟು, ಒಂದು ವೇಳೆ ತಮ್ಮ ಮಾತಿಗೆ ವಿರೋಧ ವ್ಯಕ್ತಪಡಿಸಿದರೆ, ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. “ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ, ಒಂದು ವೇಳೆ ನೀವು ಮನೆಯಿಂದ ಹೊರಗೆ ಕಾಲಿಟ್ಟರೆ ನಮ್ಮ ಸಿಬ್ಬಂದಿ ಗುಂಡು ಹಾರಿಸುತ್ತಾರೆ” ಎಂದು ಹೇಳಿ ದಂಪತಿಯನ್ನು ಸಂಪೂರ್ಣವಾಗಿ ಭಯಭೀತರನ್ನಾಗಿಸಿದ್ದರು. ಇದರಿಂದ ತೀವ್ರವಾಗಿ ಗಾಬರಿಗೊಂಡ ದಂಪತಿಗಳು, ತಕ್ಷಣವೇ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ, ತಮ್ಮ ಎಫ್‌ಡಿ (FD) ಯಲ್ಲಿದ್ದ ಒಟ್ಟು 84 ಲಕ್ಷ ರೂ. ಹಣವನ್ನು ತುರ್ತಾಗಿ ಉಳಿತಾಯ ಖಾತೆಗೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದರು.
ಡಿ. 3ರ ಬೆಳಿಗ್ಗೆ, ದಂಪತಿಗಳು ವಂಚಕರ ಒತ್ತಡಕ್ಕೆ ಮಣಿದು ಎಫ್‌ಡಿ ಹಣವನ್ನು ಉಳಿತಾಯ ಖಾತೆಗೆ ವರ್ಗಾಯಿಸಿದಾಗ, ಈ ಅಸಾಮಾನ್ಯ ವರ್ಗಾವಣೆಯ ಬಗ್ಗೆ ಬ್ಯಾಂಕ್ ಮ್ಯಾನೇಜರ್‌ಗೆ ತೀವ್ರ ಸಂಶಯ ಮೂಡಿತು. ಅವರು ತಕ್ಷಣವೇ ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಕೂಡಲೇ ದಂಪತಿಯ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಇದು ‘ಡಿಜಿಟಲ್ ಅರೆಸ್ಟ್’ ವಂಚನೆಯ ಪ್ರಕರಣ ಎಂಬುದು ದೃಢವಾಯಿತು. ಕೂಡಲೇ ಎಚ್ಚೆತ್ತ ಪೊಲೀಸರು ವೃದ್ಧ ದಂಪತಿಯ ಉಳಿತಾಯ ಖಾತೆಯಲ್ಲಿದ್ದ 84 ಲಕ್ಷ ರೂ. ಹಣವನ್ನು ಫ್ರೀಜ್ (Freeze) ಮಾಡಿದರು. ಈ ಸಮಯೋಚಿತ ಕಾರ್ಯಾಚರಣೆಯಿಂದಾಗಿ ವಂಚಕರಿಗೆ ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ದಂಪತಿಗಳು ಬೃಹತ್ ವಂಚನೆಯಿಂದ ಪಾರಾಗಿದ್ದಾರೆ.








