(ನ್ಯೂಸ್ ಕಡಬ) newskadaba.com ಕಡಬ, ಮೇ.02. ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿಯನ್ನು ಆರಿಸಿಕೊಂಡು ಗುಜರಾತ್, ಅಸ್ಸಾಂ ವರೆಗೂ ದೇಶ ಸುತ್ತಿ ಲೋಕ ಜ್ಞಾನ ಹೊಂದಿದ ಅಪ್ಪ… ಬಡತನವನ್ನು ಹೋಗಲಾಡಿಸಲು ಶಿಕ್ಷಣವೇ ಅಸ್ತ್ರವೆಂದು ಬಲವಾದ ನಂಬಿಕೆ ಹೊಂದಿದ ಅಮ್ಮ…. ತಾವು ಅನುಭವಿಸಿದ ಕಷ್ಟವನ್ನು ತಮ್ಮ ಮಕ್ಕಳು ಅನುಭವಿಸಬಾರದೆಂದು ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮುಗ್ದ ಮನಸ್ಸಿನ ತಂದೆ ತಾಯಿ… ಇಷ್ಟೆಲ್ಲಾ ಕಷ್ಟಗಳ ಮಧ್ಯೆ ರಾತ್ರಿ ಹಗಲೆನ್ನದೆ ಓದಿ ಕಲಿತು ಡಾಕ್ಟರ್ ಆದ ಗ್ರಾಮೀಣ ಯುವಕ…
ಇದು ಯಾವುದೋ ಸಿನಿಮಾದ ಕಥೆಯಲ್ಲ. ಇದು ನಮ್ಮೂರಾದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಗ್ರಾಮದ ದೊಣಿಮನೆ ನಿವಾಸಿ ಪ್ರಸ್ತುತ ರಿಕ್ಷಾ ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿರುವ ದುಶ್ಯಂಥ್ ಹಾಗೂ ಪ್ರೇಮಾ ದಂಪತಿಯ ಹಿರಿಯ ಪುತ್ರ ಡಾ| ಅವಿನ್ ಡಿ.ಪಿ.ಯವರ ಕಥೆ. ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಲೆಕ್ಕಾಚಾರ ಹಾಕುವ ಪರಿಸ್ಥಿತಿಯಲ್ಲಿ ತನ್ನ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಕಲಿತು ಉನ್ನತ ಮಟ್ಟಕ್ಕೇರಬೇಕೆನ್ನುವ ಮಹದಾಸೆಯಿಂದ ಕೊರಳಲ್ಲಿದ್ದ ಚಿನ್ನದ ಓಲೆಯನ್ನು ಬ್ಯಾಂಕಿನಲ್ಲಿ ಅಡವಿಟ್ಟು ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಿದ ತಂದೆ-ತಾಯಿಯ ಮುಂದಾಲೋಚನೆ ಅದೆಂತಹದ್ದು ಆಗಿರಬಹುದು. ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗುವ ಮಕ್ಕಳು ಚುರುಕಾಗಿ ಇಂಗ್ಲೀಷ್ ಮಾತನಾಡುವುದನ್ನು ನೋಡಿ ತಮ್ಮ ಮಕ್ಕಳು ಏಕೆ ಹೀಗಾಗಬಾರದು ಎಂಬ ಕನಸು ಅವರದ್ದು. ತಮ್ಮ ಬಡತನದ ಅರಿವು ತನ್ನ ಮಕ್ಕಳಿಗೆ ಆಗಬಾರದೆಂದು ರಾತ್ರಿ ಹಗಲೆಂದು ರಿಕ್ಷಾ ಓಡಿಸಿ ಶಕ್ತಿ ಮೀರಿ ಕಷ್ಟಪಟ್ಟು ಬೆಳೆಸಿದ ತಂದೆ ಒಂದೆಡೆಯಾದರೆ, ರಾತ್ರಿ 12 ಗಂಟೆ ತನಕ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಬೀಡಿ ಕಟ್ಟಿ ದುಡ್ಡು ಸೇರಿಸುತ್ತಿದ್ದ ಅಮ್ಮ ಇನ್ನೊಂದೆಡೆ.
ಒಂದರಿಂದ ಹತ್ತನೆಯ ತರಗತಿವರೆಗೂ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮದಲ್ಲಿ ಕಲಿತು ಪರೀಕ್ಷೆಯಲ್ಲಿ 95% ಅಂಕ ಗಳಿಸಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದತ್ತು ಸ್ವೀಕಾರದ ಕಾರ್ಯಕ್ರಮದಲ್ಲಿ ಸೀಟು ಗಿಟ್ಟಿಸಿಕೊಂಡ ಹಳ್ಳಿ ಹುಡುಗ. ದಿನನಿತ್ಯ ಬೆಳಗ್ಗೆ 4:45 ಕ್ಕೆ ಎದ್ದು ದಿನಚರಿ ಆರಂಭಿಸಿ ದೈನಂದಿನ ಸತತ 12 ರಿಂದ 14 ಗಂಟೆಗಳ ಕಾಲ ಓದಿನಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮಗನ ವ್ಯಾಸಂಗಕ್ಕೆ ರಿಕ್ಷಾ ಓಡಿಸಿ ಬಂದ ಆದಾಯ ಸಾಲುತ್ತಿಲ್ಲವೆಂದು ಮರಳು ಸಾಗಣೆಯ ಕೆಲಸದಲ್ಲಿ ತೊಡಗಿದ್ದ ಅಪ್ಪ. ಬೆಳ್ಳಗಿದ್ದ ಅಪ್ಪನ ಮೈ ಬಿಸಿಲಿಗೆ ಸುಟ್ಟು ಕಪ್ಪಗಾಗಿರುವುದನ್ನು ಕಾಣುವ ಹೊತ್ತಲ್ಲಿ ಮಗ ಓದಿ ಎಂಬಿಬಿಎಸ್ ಡಾಕ್ಟರ್ ಆಗಿದ್ದ. ಈ ಹುಡುಗ ಎಲ್ಲರಂತೆ ಡಾಕ್ಟರ್ ಆಗುವ ಕನಸು ಕಂಡವನಲ್ಲ. ಡಾಕ್ಟರ್ ಆಗುವುದು ನಮ್ಮಂತಹವರ ಕನಸಿಗೆ ನಿಲುಕದ ವಿಷಯ ಎಂದುಕೊಂಡಿದ್ದ ಈತನಲ್ಲಿ ಏನೋ ಒಂದು ಛಲ ಮನೆ ಮಾಡಿತು.
ಕಾಲೇಜಿನಲ್ಲಿ ಶಿಕ್ಷಣ ಆರಂಭವಾದ ಮೇಲೆ ಕಷ್ಟಪಟ್ಟರೆ ಡಾಕ್ಟರ್ ಆಗುವುದು ನಮ್ಮಿಂದಲೂ ಸಾಧ್ಯ ಎಂದರಿತು ಸತತ ಪರಿಶ್ರಮದ ಫಲದಿಂದ ರಾಜ್ಯಕ್ಕೆ 685 ರ್ಯಾಂಕ್ ಗಳಿಸಿ, ರಾಜ್ಯದ ಪ್ರತಿಷ್ಠಿತ ಸರಕಾರಿ ಕಾಲೇಜಾದ ‘ಮೈಸೂರು ಮೆಡಿಕಲ್ ಕಾಲೇಜಿನಲ್ಲಿ’ ಸೀಟು ಗಿಟ್ಟಿಸಿಕೊಂಡು, ಎಂಬಿಬಿಎಸ್ ಮುಗಿಸಿದ್ದಲ್ಲದೆ ಒಂದು ವರ್ಷ ಗೃಹ ವೈದ್ಯರಾಗಿ ಸೇವೆ ಸಲ್ಲಿಸಿ 2018 ಮಾರ್ಚ್ 22 ರಂದು ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ| ಬಿ.ಎನ್. ಗಂಗಾಧರ್ ರವರಿಂದ ಅಧಿಕೃತವಾಗಿ ಡಾಕ್ಟರ್ ಪದವಿಯನ್ನು ಸ್ವೀಕರಿಸಿದಾಗ ಈತನ ಕಣ್ಣಲ್ಲಿ ಆನಂದಬಾಷ್ಪ ಹೊರಹೊಮ್ಮಿತ್ತು. ತನ್ನ ತಂದೆ ತಾಯಿಯ ಕನಸುಗಳನ್ನು ನನಸು ಮಾಡಿದ ಹೆಮ್ಮೆಯಿತ್ತು. ಇದೀಗ ಮತ್ತೆ ಎಂಡಿ ಮಾಡುವುದಕ್ಕಾಗಿ ಪ್ರವೇಶ ಪರೀಕ್ಷೆ ಬರೆಯಲು ಅಣಿಯಾಗುತ್ತಿರುವ ಈತನ ಸಾಧನೆಯನ್ನು ನಾವು ಗುರುತಿಸಬೇಕಿದೆ. ಪ್ರೋತ್ಸಾಹಿಸಬೇಕಿದೆ. ಈತನ ಸಹೋದರನೂ ಅಣ್ಣನಂತೆಯೇ ಆಗಬೇಕೆಂಬ ಕನಸು ಹೊತ್ತು ಇದೀಗ ಸರಕಾರಿ ಕೋಟಾದಡಿ ದಂತ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ತಾನೂ ಓರ್ವ ದಂತ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ.
ಮನೆಯಲ್ಲಿ ಬಡತನವಿದ್ದರೂ ಹೆತ್ತವರು ತಮ್ಮ ಕಷ್ಟಗಳನ್ನು ಮರೆತು ತನಗೆ ನೀಡಿದ ಕಠಿಣ ಪ್ರೋತ್ಸಾಹದಿಂದಾಗಿ ಉನ್ನತ ವ್ಯಾಸಂಗ ಮಾಡುವುದಕ್ಕೆ ಸಾಧ್ಯವಾಗಿದೆ. ತಂದೆ ತಾಯಿಯ ಕನಸನ್ನು ನನಸು ಮಾಡಿದ ಬಗ್ಗೆ ಅಭಿಮಾನವಿದೆ.
ಡಾ| ಅವಿನ್