(ನ್ಯೂಸ್ ಕಡಬ) newskadaba.com, ಅ. 28 ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಇಂದಿನಿಂದ ತೆಲಂಗಾಣ ಮಾದರಿಯ ನೇವಿ ಬ್ಲೂ ಬಣ್ಣದ ಹೊಸ ‘ಪಿ ಕ್ಯಾಪ್’ಧರಿಸಲಿದ್ದಾರೆ. ಈ ಮೂಲಕ ದಶಕಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಪೊಲೀಸ್ ಇಲಾಖೆ ಅಂತಿಮ ವಿದಾಯ ಹೇಳಲಿದೆ. ತೆಲಂಗಾಣ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯದಲ್ಲಿ ಅಚ್ಚೊತ್ತಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಾಂಕೇತಿಕವಾಗಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಂದ ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಇದೇ ಸಮಯದಲ್ಲಿ ಸಿಎಂ, ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗೂ ಅವರು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.












