(ನ್ಯೂಸ್ ಕಡಬ) newskadaba.com, ಅ.17: ಕಾಂಗ್ರೆಸ್ ಶಾಸಕ ಆರ್ವಿ ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ – II (ಕೆಎಆರ್ಸಿ-II), ನಿಗಮ-ಮಂಡಳಿಗಳು, ಸಂಸ್ಥೆ ಮತ್ತು ಪ್ರಾಧಿಕಾರಗಳ ರದ್ದು, ಹಾಗೂ ವಿಲೀನ ಸೇರಿದಂತೆ 449 ಹೊಸ ಶಿಫಾರಸುಗಳೊಂದಿಗೆ ತನ್ನ ಒಂಬತ್ತನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿತು.
ವಿಧಾನಸೌಧದಲ್ಲಿ ಗುರುವಾರ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು.
ವರದಿ ಸಲ್ಲಿಸಿದ ಬಳಿಕ ಮಾತನಾಡಿದ ದೇಶಪಾಂಡೆ ಅವರು, ರಾಜ್ಯದ 148 ನಿಗಮ-ಮಂಡಳಿಗಳ ಪೈಕಿ 82 ಸಂಸ್ಥೆಗಳನ್ನು ಪರಿಶೀಲನೆಗೊಳಪಡಿಸಲಾಗಿದೆ. 5 ವರ್ಷಗಳ ಆರ್ಥಿಕ ವ್ಯವಹಾರ, ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ರಾಜ್ಯ ಸಂಯಮ ಮಂಡಳಿ, ಸಹಕಾರಿ ಕೋಳಿ ಸಾಕಣೆ ಒಕ್ಕೂಟ, ಕರ್ನಾಟಕ ಪಲ್ ವುಡ್ ಲಿಮಿಟೆಡ್, ರಾಜ್ಯ ಆಗೋ-ಕಾರ್ನ್ ಪ್ರಾಡಕ್ಟ್ಸ್ ಲಿಮಿಟೆಡ್, ಮೈಸೂರು ಲ್ಯಾಂಪ್ ವರ್ಕ್ಸಸ್ ಲಿಮಿಟೆಡ್ ಮತ್ತು ಆಗೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್ ಮುಚ್ಚುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಜೊತೆಗೆ ಸದ್ಯ ಅವಶ್ಯಕತೆಯಿಲ್ಲದ 9 ಸರ್ಕಾರಿ ಸಂಸ್ಥೆಗಳನ್ನು ಬೇರೆ ಇಲಾಖೆ ಅಥವಾ ನಿಗಮ- ಮಂಡಳಿಗಳೊಂದಿಗೆ ವಿಲೀನಕ್ಕೆ ತಿಳಿಸಲಾಗಿದೆ. ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಕೈಗಾರಿಕೆ ನಿಗಮವನ್ನು ರೇಷ್ಮೆ ಮಾರುಕಟ್ಟೆ ಮಂಡಳಿ, ಆಹಾರ ಕರ್ನಾಟಕ ಲಿಮಿಟೆಡ್ನ್ನು ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ತುರ್ತು ನಿಗಮ, ಬೆಂಗಳೂರು ಸಬ್ ಅರ್ಬನ್ ರೈಲು ಸಂಸ್ಥೆಯನ್ನು ಕರ್ನಾಟಕ ರೈಲು ಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮೈಸೂರು ಕ್ರೋಮ್ ಟ್ಯಾನಿಂಗ್ ಸಂಸ್ಥೆಯನ್ನು ಎಂಎಸ್ಐಎಲ್ ನೊಂದಿಗೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮವನ್ನು ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ), ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)ಗಳನು ಸಂಬಂಧಿಸಿದ ನೀರಾವರಿ ನಿಗಮ ಗಳೊಂದಿಗೆ ವಿಲೀನಕ್ಕೆ ವರದಿಯಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.












