ಮಂಗಳೂರು : ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಾರದಾ ಮಹೋತ್ಸವ ಸಂಭ್ರಮಾಚರಣೆ



(ನ್ಯೂಸ್‌ ಕಡಬ) newskadaba.com,  ಸೆ.25 ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಾರದಾ ಮಹೋತ್ಸವವನ್ನು ಅತ್ಯಂತ ಭಕ್ತಿ ಸಡಗರದಿಂದ ಆಚರಿಸಲಾಯಿತು.  ಈ ಕಾರ್ಯಕ್ರಮದಂಗವಾಗಿ ಪ್ರಾರಂಭದಲ್ಲಿ ವಿದ್ಯಾ ಸಂಸ್ಥೆಯ ಧ್ಯಾನಮಂದಿರದಲ್ಲಿ ವಿದ್ಯಾಧಿದೇವತೆ ಶ್ರೀ ಶಾರದಾ ಮಾತೆಯ ವಿಗ್ರಹದ ಮುಂದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಭಜನಾ ಸಂಕೀರ್ತನೆಗೈದರು. ಬಳಿಕ ಪೂಜೆ ಹಾಗೂ ಮಂಗಳಾರತಿ ನೆರವೇರಿತು. ಅದೇ ರೀತಿ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.





ಕಾಸರಗೋಡು ಜಿಲ್ಲೆಯ ಶ್ರೀ ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನಗೈದರು.
ಸಂಸ್ಕಾರಯುಕ್ತ, ಆಧ್ಯಾತ್ಮಿಕ ಮೌಲ್ಯವನ್ನೊಳಗೊಂಡ ಶಿಕ್ಷಣವನ್ನು ನೀಡುತ್ತಿರುವ ಶಾರದಾ ವಿದ್ಯಾ ಸಂಸ್ಥೆಯ ಕೀರ್ತಿಯು ಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂಬುದಾಗಿ ಪೂಜ್ಯ ಸ್ವಾಮೀಜಿಯವರು ಆಶೀರ್ವಚನ ನುಡಿಯಲ್ಲಿ ಹೇಳಿದರು.






ಶಾರದಾ ವಿದ್ಯಾಲಯದ ಆಡಳಿತ ಪ್ರಾಂಶುಪಾಲರಾದ ಶ್ರೀ ದಯಾನಂದ ಕಟೀಲ್ ಸ್ವಾಗತಗೈದರು.
ಅಕಾಡೆಮಿಕ್ ಪ್ರಾಂಶುಪಾಲೆ ಶ್ರೀಮತಿ ಚಂದ್ರಿಕಾ ಭಂಡಾರಿ ವಂದನಾರ್ಪಣೆಗೈದರು. ವಿದ್ಯಾಲಯದ ಸಂಸ್ಕೃತ ಶಿಕ್ಷಕಿ ಶ್ರೀಮತಿ ದೀಕ್ಷಾ ಪ್ರಭು ಕಾರ್ಯಕ್ರಮ ನಿರ್ವಹಣೆಗೈದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಲಯದ ನೃತ್ಯಶಿಕ್ಷಕಿ ವಿದುಷಿ ಶುಭಾ ಶೇಷಾದ್ರಿಯವರ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರು ದೇವಿಸ್ತುತಿಯನ್ನಾಧರಿಸಿದ ಸುಂದರ ನೃತ್ಯವನ್ನು ಪ್ರಸ್ತುತಪಡಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

error: Content is protected !!
Scroll to Top