(ನ್ಯೂಸ್ ಕಡಬ) newskadaba.com, ಸೆ.24 ಬೆಂಗಳೂರು: ಆದಾಯ ಮೀರಿ ಅಸ್ತಿಗಳಿಕೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಷ್ಠಿತ PES ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿದೆ. ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ PES ಕಾಲೇಜುಗಳು ಸೇರಿದಂತೆ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಪಿಇಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಕಾಲೇಜಿನ ಮಾಲೀಕರು, ಆಡಳಿತ ಮಂಡಳಿಯವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು , ಎಲೆಕ್ಟ್ರಾನಿಕ್ ಸಿಟಿ ಕಾಲೇಜ್, ಹನುಮಂತನಗರ ಕಾಲೇಜ್ , ಆಂಧ್ರದ ಕುಪ್ಪಂ ಕಾಲೇಜ್ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಶಾಖೆಗಳ ಮೇಲೆ ದಾಳಿ ನಡೆದಿದೆ. ಬೆಳ್ಳಂ ಬೆಳಗ್ಗೆ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪಿಇಎಸ್ ಶಿಕ್ಷಣ ಸಂಸ್ಥೆಗಳನ್ನು ದೊರೆಸ್ವಾಮಿ ಪುತ್ರ ಜವಹರ್ ದೊರೆಸ್ವಾಮಿ ನೋಡಿಕೊಳ್ಳುತ್ತಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಮೇಲೆ ಐಟಿ ದಾಳಿ ನಡೆಸಿದ್ದು, ಮೂರು ಇನೋವಾ ಕಾರು ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ರೇಡ್ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಕಾಲೇಜಿನ ಹಣಕಾಸು ಲೆಕ್ಕ, ಪೀಠೋಪಕರಣಗಳ ಖರೀದಿ ಹಾಗೂ ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಖರ್ಚು ಮಾಡಿರುವ ಹಣದ ಬಗ್ಗೆ ವಿವರಗಳನ್ನು ಅಧಿಕಾರಿಗಳು ಪಡೆಯುತ್ತಿದ್ದಾರೆ. ಕಾಲೇಜು ಸಿಬ್ಬಂದಿ ವೇತನ ಹಾಗೂ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ಮಾಹಿತಿಯನ್ನು ಕೂಡ ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ.













