(ನ್ಯೂಸ್ ಕಡಬ) newskadaba.com, ಆ.26 : ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಈಗ ಟ್ರಂಪ್ ಪ್ರಸ್ತಾಪಿಸಿರುವ ಯುದ್ಧ ಇಲಾಖೆ ಸುದ್ದಿಯಲ್ಲಿದೆ.
ಅಮೆರಿಕದ ರಕ್ಷಣಾ ಇಲಾಖೆಯನ್ನು “ಯುದ್ಧ ಇಲಾಖೆ” ಎಂದು ಮರುನಾಮಕರಣ ಮಾಡುವ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ರಕ್ಷಣಾ ಇಲಾಖೆ ಎಂದು ಹೇಳುವುದಕ್ಕಿಂತಲೂ ಯುದ್ಧ ಇಲಾಖೆ (Department Of War) ಎನ್ನುವುದು ಹೆಚ್ಚು ಬಲವಾಗಿ ಧ್ವನಿಸುತ್ತದೆ ಎಂಬುದು ಟ್ರಂಪ್ ಅಭಿಪ್ರಾಯ.
ಅಮೆರಿಕ ಅಧ್ಯಕ್ಷರು ಐತಿಹಾಸಿಕ ಮಿಲಿಟರಿ ವಿಜಯಗಳ ಹೆಸರುಗಳನ್ನು ತಮ್ಮ ಆಡಳಿತದ ರಕ್ಷಣಾ ವಿಭಾಗಗಳಿಗೆ ನಾಮಕರಣ ಮಾಡಿದ್ದಾರೆ.
“ರಕ್ಷಣಾ ಇಲಾಖೆ… ಅದು ನನಗೆ ಕೇಳುವುದಕ್ಕೆ ಚೆನ್ನಾಗಿಲ್ಲ… ರಕ್ಷಣೆ ಎಂದರೇನು? ರಕ್ಷಣೆ ಏಕೆ? ಇದನ್ನು ಯುದ್ಧ ಇಲಾಖೆ ಎಂದು ಕರೆಯಲಾಗುತ್ತಿತ್ತು ಮತ್ತು ಅದು ಬಲವಾದ ಧ್ವನಿಯನ್ನು ಹೊಂದಿತ್ತು. ನಾವು ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧವನ್ನು ಗೆದ್ದಿದ್ದೇವೆ” ಎಂದು ಟ್ರಂಪ್ ಓವಲ್ ಕಚೇರಿಯಿಂದ ಮಾಧ್ಯಮಗಳನ್ನುದ್ದೇಶಿಸಿ ಹೇಳಿದ್ದಾರೆ.









