ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಕಚೇರಿ ಸ್ಥಾಪಿಸಲು ಗೃಹ ಸಚಿವರಿಗೆ ಸಂಸದ ಕ್ಯಾ.ಚೌಟ ಮನವಿ



(ನ್ಯೂಸ್ ಕಡಬ) newskadaba.com, . 01: ಹಿಂದೂ ಕಾರ್ಯಕರ್ತರ ಹತ್ಯೆ, ಡ್ರಗ್ಸ್ ಮಾಫಿಯಾ, ಭಟ್ಕಳ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್‌ಗಳ ಆತಂಕದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆದಷ್ಟು ಬೇಗ ರಾಷ್ಟ್ರೀಯ ತನಿಖಾ ದಳ(NIA)ದ ಕಚೇರಿ ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದಾರೆ.







ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಸಚಿವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಮಂಗಳೂರು ತನ್ನ ಸೂಕ್ಷ್ಮ ಭೌಗೋಳಿಕ ಸ್ಥಾನದಿಂದಾಗಿ, ಮತ್ತು ಭಟ್ಕಳ, ಕಾಸರಗೋಡಿನಂತಹ ಉಗ್ರ ಚಟುವಟಿಕೆಗಳ ಕೇಂದ್ರಗಳಿಗೆ ಹತ್ತಿರವಿರುವುದರಿಂದ, ರಾಷ್ಟ್ರ ವಿರೋಧಿ ಶಕ್ತಿಗಳು ತಮ್ಮ ವಕ್ರ ದೃಷ್ಟಿ ಬೀರಿರುವುದಕ್ಕೆ ಕೆಲವೊಂದು ಘಟನೆಗಳು ಸಾಕ್ಷಿಯಾಗಿವೆ. ಅಲ್ಲದೆ ನಿಷೇಧಿತ ಪಿಎಫ್‌ಐ ಸಂಘಟನೆ ರಾಜಕೀಯ ಮುಖವಾಣಿ ಎಸ್‌ಡಿಪಿಐ ತನ್ನ ಮೂಲಕ ಹೊಸ ರೂಪ ತಳೆದು ಮುಂದುವರಿದಿರುವುದು ಮಾತ್ರವಲ್ಲದೇ, ಪ್ರಜಾಪ್ರಭುತ್ವದ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಮೂಲಭೂತವಾದಿ, ಅಜೆಂಡಾಗಳನ್ನು ಮುಂದುವರೆಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.






ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಬಂಧನಗಳು ಮತ್ತು ಚಟುವಟಿಕೆಗಳು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಎನ್‌ಐಎ ತನಿಖಾಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಪಿಎಫ್‌ಐ ಸಂಘಟನೆಯ ಗುಪ್ತ ಭಾಗವಾಗಿದ್ದ ಸರ್ವೀಸ್ ಟೀಂನ ಅಸ್ತಿತ್ವ, ರಹಸ್ಯ ಸಭೆಗಳು, ತರಬೇತಿ ಕೇಂದ್ರದ ಬಗ್ಗೆಯೂ ಎನ್‌ಐಎ ತನಿಖೆಗಳು ಬೆಳಕುಚೆಲ್ಲಿತ್ತು. ಹೀಗಿರುವಾಗ, ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಅಗತ್ಯತೆಯನ್ನು ಕ್ಯಾ. ಚೌಟ ಅವರು ಗೃಹ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಈ ನಡುವೆ, ಕಡಲ ನಗರಿಯಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಅಂಕುಶ ಹಾಕಲು ವಿನಂತಿಸಿರುವ ಸಂಸದ ಕ್ಯಾ. ಚೌಟ ಅವರು, ಕಳೆದ ಮಾರ್ಚ್ ನಲ್ಲಿ ಮಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37 ಕೆ.ಜಿ.ಗೂ ಹೆಚ್ಚು ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಅಂತರರಾಷ್ಟ್ರೀಯ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಪ್ರಸಕ್ತ ವರ್ಷದಲ್ಲೇ ಇಲ್ಲಿವರೆಗೆ ಜಿಲ್ಲೆಯಲ್ಲಿ 375ಕ್ಕೂ ಹೆಚ್ಚು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 67ಕ್ಕೂ ಹೆಚ್ಚು ವ್ಯಕ್ತಿಗಳು ಬಂಧನವಾಗಿರುವ ಬಗ್ಗೆ ಅಂಕಿ-ಅಂಶಗಳಿವೆ. ಡ್ರಗ್ಸ್ ಚಟುವಟಿಕೆಗಳು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು, ಕುಮ್ಮಕ್ಕು ಒದಗಿಸುವುದಲ್ಲದೇ, ಸಾಮಾಜಿಕ ಅಸ್ಥಿರತೆ, ಅಪರಾಧ ಹಾಗೂ ಗಡಿಗಳಲ್ಲಿ ಭದ್ರತಾ ಸವಾಲುಗಳನ್ನು ಹೆಚ್ಚಿಸುವ ಮೂಲಕ ರಾಷ್ಟ್ರೀಯ ಭದ್ರತೆಗೂ ಗಂಭೀರ ಬೆದರಿಕೆಯಾಗುತ್ತಿದೆ ಎಂದು ಸಂಸದರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!
Scroll to Top