(ನ್ಯೂಸ್ ಕಡಬ) newskadaba.com ಜು. 20: ಖ್ಯಾತ ತೆಂಕುತಿಟ್ಟು ಯಕ್ಷಗಾನ ಕಲಾವಿದ ಹಾಗೂ ಹಿರಿಯ ಬಣ್ಣ ವೇಷ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅವರು ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯ ಮಂಚಕಲ್ ನಿವಾಸಿಯಾಗಿದ್ದ ಸದಾಶಿವ ಶೆಟ್ಟಿಗಾರ್, ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಬಣ್ಣದ ವೇಷದ ಮೂಲಕ ತಮ್ಮದೇ ಆದ ಮಾತುಗಾರಿಕೆಯಿಂದ ಗಮನ ಸೆಳೆದಿದ್ದರು.
ಹನುಮಗಿರಿ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿದ್ದ ಶೆಟ್ಟಿಗಾರ್ ಅವರ ಅಂತ್ಯಕ್ರಿಯೆಯನ್ನು ಸ್ವಗೃಹದಲ್ಲಿ ಸಂಜೆ ನೆರವೇರಿಸಲಾಯಿತು. ಸಹೋದ್ಯೋಗಿ ಕಲಾವಿದರು, ಅಭಿಮಾನಿಗಳು ಹಾಗೂ ಬಂಧುಮಿತ್ರರು ಪಾಲ್ಗೊಂಡಿದ್ದರು.
10 ವರ್ಷ ಕಟೀಲು ಮೇಳ, 13 ವರ್ಷ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷ ಸಹಿತ ಹಲವು ಪಾತ್ರಗಳನ್ನು ನಿರ್ವಹಿಸಿದ್ದು, ಬಳಿಕ ಕಳೆದ ವರ್ಷದವರೆಗೆ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಹಾಗೂ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದ ಇವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ, ಸನ್ಮಾನಗಳು ಶೆಟ್ಚಿಗಾರ್ ಮುಡಿಗೇರಿವೆ.
ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ತೊಡಗಿಸಿಕೊಂಡಿದ್ದ ಸದಾಶಿವ ಶೆಟ್ಟಿಗಾರ್, ಇತ್ತೀಚಿನವರೆಗೂ ಹನುಮಗಿರಿ ಮೇಳದೊಂದಿಗಿದ್ದರು. ಕೆಲವೇ ತಿಂಗಳುಗಳ ಹಿಂದಷ್ಟೇ ಮೇಳದಿಂದ ಹೊರಬಂದು, ನಿವೃತ್ತಿ ಘೋಷಿಸಿದ್ದರು.









