(ನ್ಯೂಸ್ ಕಡಬ) newskadaba.com, ಜು. 14. 2024- 25 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಪ್ರಥಮ ಮತ್ತು ದ್ವಿತೀಯ ಭಾಷೆ ಕನ್ನಡದಲ್ಲಿ ಪೂರ್ಣ ಅಂಕಗಳಿಸಿದ ಹಾಗೂ ಅತ್ಯುತ್ತಮ ಸಾಧನೆಗೈದ ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಜುಲೈ 12 2025 ಶನಿವಾರದಂದು ರಾಮಕುಂಜ ವಸತಿ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಕಡಬ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಕೆ ಸೇಸಪ್ಪ ರೈ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದುಕೊಂಡಿರುವುದು ವಿದ್ಯಾರ್ಥಿಗಳು ಮಾಡಿರುವ ದೊಡ್ಡ ಸಾಧನೆಯಾಗಿದೆ. ಏಕಾಗ್ರತೆಯಿಂದ ಅಧ್ಯಯನಶೀಲರಾದಾಗ ಇಂತಹ ಸಾಧನೆಗಳನ್ನು ಮಾಡಲು ಸಾಧ್ಯ, ಈ ಸಾಧನೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೆಟ್ಟಿಲು ಸಹ ಆಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಸುಬ್ರಮಣ್ಯ ಮಠ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಶರ್ಮ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡಲ್ಲಿ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಿದೆ, ಎಲ್ಲಿಯೇ ಹೋದರೂ ಕನ್ನಡದ ಮೇಲಿನ ಅಭಿಮಾನ ಮರೆಯದಿರಿ ಎಂದರು. ಇನ್ನೋರ್ವ ಅತಿಥಿ ಶ್ರೀ ಚನ್ನಪ್ಪ ಗೌಡ ನಿವೃತ್ತ ಸಹಾಯಕ ನಿರ್ದೇಶಕರು ಕಡಬ ತಾಲೂಕ್ ಪಂಚಾಯತ್ ಇವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪುಸ್ತಕ ಓದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಇದರಿಂದ ಮಾನಸಿಕ ಒತ್ತಡವು ಕಡಿಮೆಯಾಗಲಿದೆ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಲಿದೆ ಎಂದರು. ಕಡಬ ತಾಲೂಕಿನ ವಿವಿಧ ಶಾಲೆಗಳ ಸುಮಾರು 31 ವಿದ್ಯಾರ್ಥಿಗಳಿಗೆ ಪುಸ್ತಕ, ಪ್ರಮಾಣ ಪತ್ರ,ಕನ್ನಡ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. 620ಕ್ಕಿಂತ ಹೆಚ್ಚು ಅಂಕ ಗಳಿಸಿರುವ ತಾಲೂಕಿನ ವಿದ್ಯಾರ್ಥಿಗಳನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಡಬ ತಾಲೂಕು ಪಂಚಾಯತ್ ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀ ಚೆನ್ನಪ್ಪ ಗೌಡ ಇವರನ್ನು ಕ.ಸಾ.ಪ.ಕಡಬ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜನಾರ್ದನ ಗೌಡ ಪಣೆಮಜಲು, ಹೋಬಳಿ ಅಧ್ಯಕ್ಷ ಶ್ರೀ ಪದ್ಮಪ್ಪಗೌಡ, ಗೌರವ ಕಾರ್ಯದರ್ಶಿಗಳಾದ ಶ್ರೀ ಎನ್ ಕೆ ನಾಗರಾಜ್, ಶ್ರೀ ಡಿ ವಸಂತಕುಮಾರ್, ಗೌರವ ಕೋಶಾಧ್ಯಕ್ಷರಾದ ಶ್ರೀ ಬಾಲಚಂದ್ರ ಮುಚ್ಚಿಂತಾಯ, ಸದಸ್ಯರಾದ ಶ್ರೀ ರಮೇಶ್ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ ಸಾ.ಪ ಕಡಬ ಘಟಕದ ಸದಸ್ಯರಾದ ಶ್ರೀ ವೆಂಕಟರಮಣ ಭಟ್, ಶ್ರೀ ಯಶವಂತ ರೈ,ಶ್ರೀ ಎ ಎನ್ ಕೊಳಂಬೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಪೋಷಕರು ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು. ಕಸಾಪ ಕಡಬ ಘಟಕ ಕೋಶಾಧಿಕಾರಿ ಶ್ರೀ ಬಾಲಚಂದ್ರ ಮುಚ್ಚಿಂತಾಯ ಸ್ವಾಗತಿಸಿದರು. ಸದಸ್ಯೆ ಶ್ರೀಮತಿ ಪ್ರೇಮ ಬಿ. ವಂದಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ಬಿ ಕಾರ್ಯಕ್ರಮ ನಿರೂಪಿಸಿದರು.









