(ನ್ಯೂಸ್ ಕಡಬ) newskadaba.com, ಜು. 09. ಬೆಂಗಳೂರು: ಲಷ್ಕರೆ ತಯ್ಬಾ (LeT) ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (NIA) ನಿನ್ನೆ ಮಂಗಳವಾರ ಬಂಧಿಸಿದೆ.
ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್, ಎಎಸ್‌ಐ ಚಾನ್‌ಪಾಷಾ, ಕೋಲಾರದ ಅನೀಸಾ ಫಾತೀಮಾ ಬಂಧಿತರು. ಆರೋಪಿ ಅನಿಸಾ, ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಅಹಮ್ಮದ್‌ನ ತಾಯಿ.
ಈ ಮೂವರು ಶಂಕಿತರು ಜೈಲಿನಲ್ಲಿರುವ ಎಲ್‌ಇಟಿ ಉಗ್ರ ಟಿ.ನಾಸೀರ್‌ನ ಉಗ್ರ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಕೋಲಾರ ಹಾಗೂ ಬೆಂಗಳೂರು ಸೇರಿದಂತೆ ಐದು ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ, ಚಿನ್ನಾಭರಣ, ಎರಡು ವಾಕಿಟಾಕಿ, ಡಿಜಿಟಲ್ ಪರಿಕರಗಳು ಸಿಕ್ಕಿವೆ ಎಂದು ಎನ್‌ಐಎ ತಿಳಿಸಿದೆ.













