ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಹೆಸರು



(ನ್ಯೂಸ್‌ ಕಡಬ) newskadaba.com ಜು.02: ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಹೆಸರಿಡಲು ಇಂದು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.







ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ವಿವಿ ಹೆಸರು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಗೂ ಬಾಗೇಪಲ್ಲಿ ತಾಲೂಕು ಕೇಂದ್ರದ ಹೆಸರು ಬದಲಾಯಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂದೇ ಗುರುತಿಸಿಕೊಂಡಿರುವ ಮನಮೋಹನ್ ಸಿಂಗ್ ಅವರ ಹೆಸರನ್ನು ವಿಶ್ವವಿದ್ಯಾಲಯವೊಂದಕ್ಕೆ ಇಡುತ್ತಿರುವುದು ದೇಶದಲ್ಲಿ ಇದೇ ಮೊದಲು.






ಕಳೆದ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್​ ಭಾಷಣದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದರು. ಇದೀಗ ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮನಮೋಹನ್​ ಸಿಂಗ್​ ಅವರು ಕಳೆದ ವರ್ಷ ಡಿಸೆಂಬರ್​ 26 ರಂದು ಇಹಲೋಕ ತ್ಯಜಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ, ಸ್ಥಳೀಯರ ಬೇಡಿಕೆಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಲು ಸಚಿವ ಸಂಪುಟ ನಿರ್ಧರಿಸಿದೆ. ಬಾಗೇಪಲ್ಲಿ ಎನ್ನುವುದು ತೆಲುಗು ಭಾಷೆಯಿಂದ ಬಂದಿದೆ ಎಂದು ಸ್ಥಳೀಯರು ಹೆಸರು ಬದಲಾವಣೆಗೆ ಕೋರಿದ್ದರು. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿರುವ ಈ ಪಟ್ಟಣವು ಕರ್ನಾಟಕ ಮತ್ತು ತೆಲಂಗಾಣ ಗಡಿಯಿಂದ ಕೇವಲ 10 ಕಿಲೋ ಮೀಟರ್​ ದೂರದಲ್ಲಿದೆ.

error: Content is protected !!
Scroll to Top