ಮನಪಾ ಅವ್ಯವಹಾರದ ಆರೋಪ ಲೋಕಾಯುಕ್ತ ದಿಢೀರ್ ದಾಳಿ

(ನ್ಯೂಸ್ ಕಡಬ) newskadaba.com ಜೂ. 22. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರದ ನಡೆದಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆ ಲೋಕಾಯುಕ್ತ ದ.ಕ. ಜಿಲ್ಲಾ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ನೇತೃತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಶನಿವಾರದಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಆರೋಪಕ್ಕೆ ಸಂಬಂಧಪಟ್ಟ ಕೆಲವು ದಾಖಲೆ ಪತ್ರಗಳು ಲಭಿಸಿದೆ ಎನ್ನಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಏಜೆಂಟರ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿ ಮೀರಿದ್ದು, ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಕಡತಗಳು ವಿಲೇವಾರಿಯಾಗದೇ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ಲೋಕಾಯುಕ್ತರಿಗೆ ದೂರುಗಳು ಬಂದಿದ್ದವು. ಹೀಗಾಗಿ ಶನಿವಾರ ದ.ಕ. ಮತ್ತು ಉಡುಪಿ ಲೋಕಾಯುಕ್ತ ಅಧಿಕಾರಿಗಳು 6 ತಂಡದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಮಹಾನಗರಪಾಲಿಕೆಯ ಇಂಜಿನಿಯರ್, ಆಹಾರ, ಕಂದಾಯ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಈ ವೇಳೆ ಮಹಾನಗರಪಾಲಿಕೆಯಲ್ಲಿ ಏಜೆಂಟರೇ ತುಂಬಿದ್ದು, ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

Scroll to Top