(ನ್ಯೂಸ್ ಕಡಬ) newskadaba.com ಜೂ. 20. ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ರಾತ್ರಿ ವೇಳೆ ತೆರಳಿ ಜಿಪಿಎಸ್ ಫೋಟೋ ತೆಗೆದ ಬಳಿಕದ ಬೆಳವಣಿಗೆಯಲ್ಲಿ ನಡೆದ ಘಟನೆಗಳ ಹಿನ್ನೆಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಬುಧವಾರದಂದು ರಾತ್ರಿ ಕಡಬಕ್ಕೆ ಆಗಮಿಸಿ ಹಿಂದೂ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಮಂಗಳೂರಿಗೆ ಆಗಮಿಸಿದ್ದ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು, ಪುತ್ತೂರಿಗೆ ಆಗಮಿಸಿ ಬಳಿಕ ರಾತ್ರಿ ವೇಳೆ ಕಡಬಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಯ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದ.ಕ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಅವರ ಸೂಚನೆಯಂತೆ ಪೊಲೀಸರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖರ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಕಡಬದಲ್ಲಿ ರಾತ್ರಿ ವೇಳೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡವರ ಮನೆಗೆ ತೆರಳಿ ಜಿ.ಪಿಎಸ್ ಫೋಟೋ ತೆಗದುಕೊಂಡು ಹೋಗಿದ್ದರು. ಇದನ್ನು ವಿರೋಧಿಸಿದ್ದ ಇಲ್ಲಿನ ಹಿಂದೂ ಮುಖಂಡರು ಪೋಲೀಸರ ನಡೆಯಿಂದ ಹಿಂದೂ ಕಾರ್ಯಕರ್ತರ ಮನೆಯಲ್ಲಿ ಆತಂಕ ಸೃಷ್ಠಿಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಕಡಬ ಠಾಣೆಗೆ ತೆರಳಿದ್ದ ಹಿಂದೂ ಕಾರ್ಯಕರ್ತರು ಪೋಲೀಸರ ನಡೆಯನ್ನು ಖಂಡಿಸಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.
ಮರುದಿನ ಠಾಣೆಯ ಮುಂದೆ ಜಮಾಯಿಸಿದ್ದ ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರ ಮೇಲೆ ಕಡಬ ಪೊಲೀಸರು ಸುಮೊಟೋ ಕೇಸ್ ದಾಖಲಿಸಿದ್ದರು. ಇದರ ಬೆನ್ನಿಗೇ ಜಿಲ್ಲೆಯಲ್ಲಿ ಹಲವರಿಗೆ ಗಡಿಪಾರು ಆದೇಶದ ನೋಟೀಸು ಕೂಡಾ ನೀಡಲಾಗಿತ್ತು. ಈ ಎರಡೂ ವಿಚಾರಗಳನ್ನು ಖಂಡಿಸಿ ಕಡಬ ಠಾಣೆಯ ಮುಂಭಾಗದ ರಸ್ತೆ ಬದಿಯಲ್ಲಿ ಬಿಜೆಪಿ ಹಾಗೂ ಹಿಂದೂ ಪರಿವಾರ ಸಂಘಟನೆಯವರು ಪ್ರತಿಭಟನೆ ಸಲ್ಲಿಸಿದ್ದರು.
ರಾಜ್ಯದಲ್ಲಿ ಹಿಂದೂಗಳ ಮೇಲೆ ಸರಕಾರ ಪ್ರೇರಿತ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಸರಕಾರದ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಕಡಬಕ್ಕೆ ಆಗಮಿಸಿ ಹಿಂದೂ ಕಾರ್ಯಕರ್ತರಿಂದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ|ಕೃಷ್ಣ ಪ್ರಸಾದ್, ಕಡಬ ಪ್ರಖಂಡದ ಪ್ರಮುಖರಾದ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ರೈ, ಜಯಂತ್ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.









