(ನ್ಯೂಸ್ ಕಡಬ) newskadaba.com ಜೂ. 20. ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳ ರೆಂಬೆಯನ್ನು ಕಡಿಯಲು ಪುರಸಭೆ ಪಟ್ಟಿ ಸಲ್ಲಿಸಿದ್ದು, ಆದರೆ ಅರಣ್ಯ ಇಲಾಖೆಯು ಸೋಮೇಶ್ವರ ಕಡಲ ತೀರದಲ್ಲಿದ್ದ ಬೆಲೆ ಬಾಳುವ ಗಾಳಿ ಮರಗಳನ್ನು ಕಡಿದಿರುವ ಘಟನೆ ನಡೆದಿದೆ.
ಕಡಲ ತೀರದಲ್ಲಿ ಅಪಾಯದಲ್ಲಿದ್ದ ಎರಡು ಗಾಳಿ ಮರ ಸೇರಿದಂತೆ ಪುರಸಭೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾದ ಮರಗಳ ಪಟ್ಟಿ ಮಾಡಿ ರೆಂಬೆ ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಆದರೆ ಅರಣ್ಯ ಇಲಾಖೆ ಅದರ ಬದಲಾಗಿ ಕಡಲ ತೀರದ ಐದು ಗಾಳಿ ಮರಗಳನ್ನು ಬುಡ ಸಮೇತ ಕಡಿದು ಸಾಗಿಸಿದೆ ಎಂದು ಆರೋಪಿಸಲಾಗಿದ್ದು, ಇದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಷಯದ ಕುರಿತು ಮಾತನಾಡಿದ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಅವರು, ನಮ್ಮ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳ ತೆರವಿಗೆ ಪಟ್ಟಿಯನ್ನು ನಾವು ಅರಣ್ಯ ಇಲಾಖೆಗೆ ನೀಡಿದ್ದೇವೆ. ಆದರೆ ಪಟ್ಟಿಯಲ್ಲಿರುವ ಯಾವುದೇ ಮರಗಳನ್ನು ಇಲ್ಲಿಯವರೆಗೆ ತೆಗೆದುಹಾಕಲಾಗಿಲ್ಲ. ಬದಲಾಗಿ, ಕರಾವಳಿಯುದ್ದಕ್ಕೂ ಗಾಳಿ ಬೀಸುವ ಮರಗಳನ್ನು ಕಡಿದು ಪುರಸಭೆಗೆ ತಿಳಿಸದೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.









