(ನ್ಯೂಸ್ ಕಡಬ) newskadaba.com ಜೂ. 20. ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ, ಕಿರುಕುಳ ವಿರುದ್ಧ ಉಪ್ಪಿನಂಗಡಿ ಹಿರಿಯ ನಾಗರಿಕ ಯು.ಜಿ.ರಾಧಾ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿರುವ ಹೈಕೋರ್ಟ್, ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದ ಹೊರತುಪಡಿಸಿ ಅರ್ಜಿದಾರರಿಗೆ ಯಾವುದೇ ತೊಂದರೆ ನೀಡದಂತೆ ನಿರ್ಬಂಧಿಸಿ ಮಧ್ಯಂತರ ಆದೇಶ ನೀಡಿದೆ.
ಪೊಲೀಸರು ಮಧ್ಯರಾತ್ರಿಯಲ್ಲಿ ಮನೆಗೆ ಬಂದು ಆರೋಪಿ ರೀತಿಯಲ್ಲಿ ಫೋಟೋ ತೆಗೆಸಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪಿಸಿ ಯು.ಜಿ.ರಾಧಾ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ಈ ಸಂಬಂಧ ಪ್ರತಿವಾದಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದರು.
ಕರ್ನಾಟಕ ಸರಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಡಾ.ಅರುಣ್ ಕೆ.ಎಸ್ಪಿ ದ.ಕ., ಅವಿನಾಶ್ ಗೌಡ ಎಸ್‌ಐ ಉಪ್ಪಿನಂಗಡಿ ಇವರನ್ನು ಪ್ರತಿವಾದಿಗಳಾಗಿ ತೋರಿಸಲಾಗಿದೆ. ಯು.ಜಿ.ರಾಧಾ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆಗೆತ್ತಿಕೊಂಡಿದ್ದು, ಘಟನೆಗೆ ಸಂಬಂಧಿಸಿ ದಾಖಲೆ ಸಮೇತ ಉತ್ತರಿಸಬೇಕು ಎಂದು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿದೆನ್ನಲಾಗಿದೆ.
ಜೂನ್ 19ರಂದು ತನಿಖೆ ಕೈಗೆತ್ತಿಕೊಂಡ ನ್ಯಾಯಪೀಠ, ಪ್ರಕರಣ ವಿಚಾರಣೆಯಲ್ಲಿರುವುದರಿಂದ ಕಾನೂನು ವಿಧಾನದ ಹೊರತುಪಡಿಸಿ ದೂರುದಾರರಿಗೆ ಯಾವುದೇ ರೀತಿಯ ಕಿರುಕುಳವನ್ನು ಪೊಲೀಸರು ನೀಡಬಾರದು. ದೂರುದಾರರ ಮನೆಗೆ ಪೊಲೀಸರು ಆಗಮಿಸಿದ್ದ ವಿದ್ಯಮಾನಕ್ಕೆ ಸಂಬಂಧಿಸಿ ದಾಖಲೆ ಸಲ್ಲಿಸಬೇಕು ಎಂದು ಸೂಚಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಘಟನೆ ಕುರಿತು ಯು.ಜಿ. ರಾಧಾ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು.









