(ನ್ಯೂಸ್ ಕಡಬ) newskadaba.com ಜೂ. 19. ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಹಾಗೆಂದು ಮೊಸಳೆ ನೋಡಲು ಹೋದ ಜನರನ್ನು ಕಂಡ ಮೊಸಳೆಯು ಬಾಯಗಳಿಸಿ ಆಕ್ರಮಣಕಾರಿ ರೀತಿಯಲ್ಲಿ ಜನರ ಕಡೆ ನೋಡಿ ನದಿ ನೀರಿಗೆ ಇಳಿದು ಹೋದ ಘಟನೆ ಬುಧವಾರ ಸಂಜೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆಯ ಬಳಿ ಕುಮಾರಧಾರ ನದಿಗೆ ಇಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ದೂರದಿಂದ ಗಮನಿಸಿದ ಮಕ್ಕಳು ಇದನ್ನು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು ನೋಡಲು ಹೋದಾಗ ಮೊಸಳೆಯು ನದಿ ದಡದಲ್ಲಿ ವಿಶ್ರಾಂತಿ ಪಡೆಯುವುದು ಕಂಡು ಬಂತು. ಇವರು ಇನ್ನೂ ಸ್ವಲ್ಪ ಹತ್ತಿರಕ್ಕೆ ಹೋದಾಗ ಮೊಸಳೆಯು ಆಕ್ರಮಣಕಾರಿಯಂತೆ ಇವರ ಕಡೆ ನೋಡಿದ್ದು, ಮತ್ತೆ ನದಿ ನೀರಿಗೆ ಇಳಿದು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಕಳೆದ ವರ್ಷ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಬಳಿಯ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಇದೀಗ ನದಿಯಲ್ಲಿ ಮೊಸಳೆಯಿರುವುದು ನದಿಗೆ ಮೀನು ಬೇಟೆಗೆ ಹೋಗುವವರಲ್ಲಿ ಆತಂಕ ಸೃಷ್ಟಿಸಿದೆ.









