(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 18. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಬೆಳ್ಳಾರೆ ನೆಟ್ಟಾರು ಘಟಕದ ಅರ್ತಿಯಡ್ಕ ಹಾಲು ಸಂಗ್ರಹ ಕೇಂದ್ರದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಪಾರ ಪ್ರಮಾಣದ ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲು ಸಂಗ್ರಹ ಕೇಂದ್ರದ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ದಾಸ್ತಾನು ಇರಿಸಲಾಗಿದ್ದ ರಬ್ಬರ್ ಮರಕ್ಕೆ ಮಳೆಕವಚ ಅಳವಡಿಸಲು ಬೇಕಾದ ಸಾಮಗ್ರಿಗಳಾದ 16,700 ರೂ. ಮೌಲ್ಯದ 12 ಟನ್ ಗಮ್, 30,950 ರೂ. ಮೌಲ್ಯದ 210 ಕೆ.ಜಿ. ಪ್ಲಾಸ್ಟಿಕ್, 9,770 ರೂ. ಮೌಲ್ಯದ 60 ಕೆ.ಜಿ. ಪ್ಲಾಸ್ಟಿಕ್ ಸ್ಟ್ರಿಪ್, 1,580 ರೂ. ಮೌಲ್ಯದ 400 ಹ್ಯಾಂಗರ್ ಸೇರಿದಂತೆ ಒಟ್ಟು 59,000 ರೂ. ಮೌಲ್ಯದ ಸೊತ್ತುಗಳು ಕಳವುಗೈದಿದ್ದಾರೆ. ಈ ಬಗ್ಗೆ ಐವರ್ನಾಡು ರಬ್ಬರ್ ವಿಭಾಗದ ನೆಟ್ಟಾರು ಘಟಕ ತೋಟದ ಅಧೀಕ್ಷಕ ಪ್ರದೀಪ್ ಕುಮಾರ್ ಅವರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









