(ನ್ಯೂಸ್ ಕಡಬ) newskadaba.com ಎ. 29: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ದೇಶದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾಳೆ ಸರಣಿ ಸಭೆಗಳು ನಡೆಯಲಿವೆ. ರಾಷ್ಟ್ರದ ಉನ್ನತ ಭದ್ರತಾ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (ಸಿಸಿಎಸ್) ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಭೆ ನಡೆಸಲಿದೆ. ಪಹಲ್ಗಾಮ್ ದಾಳಿಯ ನಂತರ ಇದು ಉನ್ನತ ಮಟ್ಟದ ಎರಡನೇ ಸುತ್ತಿನ ಚರ್ಚೆಯಾಗಿದೆ. ಈ ಸಭೆಯಲ್ಲಿ ಭದ್ರತಾ ಸಿದ್ಧತೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.


ಸಿಸಿಎಸ್ ಸಭೆಯ ನಂತರ, ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಕಮಿಟಿ ಆನ್ ಪೊಲಿಟಿಕಲ್ ಅಫೇರ್ಸ್ (ಸಿಸಿಪಿಎ) ಸಭೆಯೂ ನಡೆಯಲಿದೆ. ಪ್ರಧಾನಮಂತ್ರಿಗಳ ಜೊತೆಗೆ, ಸಿಸಿಪಿಎ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಆರೋಗ್ಯ ಸಚಿವ ಜೆಪಿ ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಹಿರಿಯ ಸಚಿವರು ಭಾಗವಹಿಸಲಿದ್ದಾರೆ.