(ನ್ಯೂಸ್ ಕಡಬ) newskadaba.com ಫೆ. 20. ನವದೆಹಲಿ : ಬರೋಬ್ಬರಿ 27 ವರ್ಷಗಳ ಬಳಿಕ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿಯು ದಿಲ್ಲಿಯ ತನ್ನ ನೂತನ ಸಿಎಂ ಆಗಿ ರೇಖಾಗುಪ್ತಾ ಹಾಗೂ ಡಿಸಿಎಂ ಆಗಿ ಪರ್ವೇಶ್ ವರ್ಮಾ ಅವರನ್ನು ಅಧಿಕೃತವಾಗಿ ಇಂದು ಘೋಷಿಸಿದೆ.


ದೆಹಲಿಯ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆಯು ವೀಕ್ಷಕರ ಸಮ್ಮುಖದಲ್ಲಿ ನಡೆಯಿತು. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಾಗಿದ್ದು, ಅಂತಿಮವಾಗಿ ಸಿಎಂ, ಡಿಸಿಎಂ ಹೆಸರು ಘೋಷಣೆ ಮಾಡಲಾಯಿತು. ನವದೆಹಲಿಯಲ್ಲಿರುವ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಾಳೆ (ಫೆ.20) ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
ಶಾಸಕಿ ರೇಖಾ ಗುಪ್ತಾರನ್ನು ದೆಹಲಿಯ ನೂತನ ಸಿಎಂ ಆಗಿ ಬಿಜೆಪಿ ಇಂದು ಘೋಷಣೆ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿದೆ. ರೇಖಾ ಗುಪ್ತಾ ಅವರು ಸಾರ್ವಜನಿಕ ಸೇವಾ ಅನುಭವ ಹೊಂದಿರುವ ಬಗ್ಗೆ ಪಕ್ಷ ಹಾಗೂ ಆರ್ಎಸ್ಎಸ್ ವಲಯದಲ್ಲೂ ಉತ್ತಮ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಎಎಪಿಯ ಅಭ್ಯರ್ಥಿ ವಂದನಾ ಕುಮಾರಿ ಅವರ ವಿರುದ್ಧ ರೇಖಾ ಅವರು ಗೆಲುವು ಸಾಧಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ-2025ರ ಮತದಾನ ಫೆ.5 ಪೂರ್ಣಗೊಂಡು, ಫೆ.8 ಮತ ಎಣಿಕೆ ನಡೆದು ಫಲಿತಾಂಶ ಹೊರ ಬಿದ್ದಿತ್ತು. ಬಿಜೆಪಿ 48 ಕ್ಷೇತ್ರಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಿದೆ. ಎಎಪಿ 22 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಎದುರು ಸೋಲುಂಡು ದಶಕಗಳ ತನ್ನ ಆಡಳಿತಕ್ಕೆ ವಿರಾಮ ಹಾಕಿಕೊಂಡಿತು. ಅತ್ತ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲದೇ ಸತತನ ಮೂರನೇ ಬಾರಿಗೂ ಹೀನಾಯ ಸೋಲನುಭವಿಸಿದ್ದು ಗೊತ್ತೇ ಇದೆ.