(ನ್ಯೂಸ್ ಕಡಬ) newskadaba.com, ಫೆ.01 ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ಅವ್ಯವಸ್ಥೆಯ ವಿರುದ್ಧ ಕೈಕಂಬದಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಕೈಕಂಬ ಜಂಕ್ಷನ್‌ನಲ್ಲಿ ಎಸ್‌ಡಿಪಿಐ ಧ್ವಜವನ್ನು ಅನ್ವರ್ ಸಾದತ್ ಬಜತ್ತೂರುರವರು ಜಿಲ್ಲಾ ಉಪಾಧ್ಯಕ್ಷರೂ, ಕಾರ್ಯಕ್ರಮದ ಉಸ್ತುವಾರಿಯೂ ಆದ ಮೂನಿಶ್ ಅಲಿಯವರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರು ಮಾತನಾಡಿ, ‘ಆಡಳಿತ ಸರ್ಕಾರವು ಜನರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲವಾಗಿದೆ. ಜನರಿಗೆ ಸುಗಮ ಸಂಚಾರಕ್ಕೆ ಸಮರ್ಪಕವಾದ ರಸ್ತೆಯನ್ನು ಮಾಡದೆ ಜನರನ್ನು ಲೂಟುವ ಟೋಲ್ ಗೇಟ್ ಮಾಡಿ ಕಳೆದ ಹನ್ನೆರಡು ವರ್ಷಗಳಿಂದ ವಸೂಲಿ ನಡೆಯುತ್ತಿದೆ. ಟೋಲ್ ಮೊತ್ತವು ಹೆಚ್ಚಾಗುತ್ತಿರುವಾಗ ಕನಿಷ್ಠ ಮೂಲ ಸೌಕರ್ಯಗಳನ್ನು ಸಹ ಒದಗಿಸದೆ ಉತ್ತರ ಭಾರತೀಯ ಹಿಂದಿ ಭಾಷಿಕ ಗೂಂಡಾಗಳನ್ನು ಇರಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇಂತಹ ಅವ್ಯವಸ್ಥೆಯಿಂದ, ಅವೈಜ್ಞಾನಿಕತೆಯಿಂದ ಕೂಡಿರುವ ಈ ಟೋಲ್‌ಗೇಟನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲೆಯ ಜನತೆಯನ್ನು ಪಕ್ಷಾತೀತವಾಗಿ ಸೇರಿಸಿ ಹೋರಾಡಲು ಎಸ್‌ಡಿಪಿಐ ಸಿದ್ಧವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.