ಯಶಸ್ವಿಗೊಂಡ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಡಿ. 11. ಸಿರಿಧಾನ್ಯಗಳಿಂದ  ತಯಾರಿಸಿದ ಪಲಾವ್, ಉಪ್ಪಿಟ್ಟು, ಕಡುಬು, ದೋಸೆ, ಪತ್ರೊಡೆ, ಹೋಳಿಗೆ ಮತ್ತೊಂದೆಡೆ ಕರಾವಳಿಯ ಸಾಂಪ್ರದಾಯಿಕ ಪುರಾತನ ಖಾದ್ಯಗಳಾದ ಕಲ್ತಪ್ಪ, ಪಜೆ ಮಡಿಕೆ, ಚಿಲಿಬಿ (ಕೊಟ್ಟಿಗೆ) ಅಡ್ಯೆ, ರಾತ್ರಿ ಉಳಿದ ಅನ್ನದಿಂದ ತಯಾರಿಸಿದ ತಂಗಳನ್ನ ಗಂಜಿ. ಇವುಗಳು ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯಮೇಳ ಪ್ರಯುಕ್ತ ಮಂಗಳವಾರದಂದು ನಗರದ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕಂಡು ಬಂದ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳ ತಿನಿಸುಗಳು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಮಹಿಳೆಯರು ತಾವು ತಯಾರಿಸಿದಂತಹ ಖಾದ್ಯಗಳನ್ನು ಪ್ರದರ್ಶಿಸಿದರು. ಪುರುಷರು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ವಿಶೇಷ.

ಕೃಷಿ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳ ಸ್ಪರ್ಧೆಯನ್ನು ನಡೆಸುತ್ತಿದೆ. ಈ ವರ್ಷ ಇದರೊಂದಿಗೆ “ಮರೆತು ಹೋದ ಖಾದ್ಯಗಳನ್ನು” ತಯಾರಿಸಿ ಪ್ರದರ್ಶನ ನೀಡುವ ಸ್ಪರ್ಧೆಯನ್ನು ಸೇರಿಸಿದೆ. ಹಿಂದಿನ ಕಾಲದಲ್ಲಿ ತಯಾರಿಸುತ್ತಿದ್ದ ವಿಶೇಷ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ, ಸ್ಪರ್ಧೆಗೆ ಇಡಲಾಗಿತ್ತು. ಇದಕ್ಕೆ ಬೇಕಾದ ಸಾಮಗ್ರಿಗಳನ್ನು ಗ್ರಾಮಾಂತರ ಪ್ರದೇಶಗಳಿಂದ ಮತ್ತು ಅರಣ್ಯ ಪ್ರದೇಶಗಳಿಂದ ಹುಡುಕಿ ತಂದು ಖಾದ್ಯಗಳನ್ನು ತಯಾರಿಸಿರುವುದು ವಿಶೇಷವಾಗಿತ್ತು. ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಗೆ ಸಾರ್ವಜನಿಕರು ಆಗಮಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ ಮಾತನಾಡಿ, ಇಂತಹ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಕೃಷಿ ಇಲಾಖೆ ಆಯೋಜಿಸುತ್ತಿರುವುದು ಶ್ಲಾಘನೀಯ. ನಮ್ಮ ಆರೋಗ್ಯ ಸಂರಕ್ಷಣೆಗೆ ಉತ್ತಮ ಸತ್ವಭರಿತ ಆಹಾರಗಳ ಅಗತ್ಯವಿದ್ದು, ಸಿರಿಧಾನ್ಯ ಆಹಾರವು ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ನಾಂದಿಯಾಗಲಿದೆ. ಮರೆತು ಹೋದ ಖಾದ್ಯಗಳ ಪ್ರದರ್ಶನದ ಮೂಲಕ ನಮ್ಮ ಪೂರ್ವಜರ ವಿಶೇಷ ಖಾದ್ಯಗಳ ಪರಿಚಯ ಆಗಲಿದೆ. ಸಿರಿಧಾನ್ಯದ ಖಾದ್ಯಗಳಿಗೆ ಸ್ವ-ಸಹಾಯ ಸಂಘಗಳ ಮೂಲಕ ಮಾರುಕಟ್ಟೆಯನ್ನು ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಕಾರ್ಯೋನ್ಮುಖವಾಗಿರುವಂತೆ ಸಲಹೆ ನೀಡಿದರು.

Also Read  ಹಂದಿ ಫಾರಂನ ಮಾಲಿನ್ಯ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತ್ಯು..!

 

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ,  ಉಪ ಕೃಷಿ ನಿರ್ದೇಶಕಿ (1) ಕುಮುದಾ ಸಿ.ಎನ್, ಪುತ್ತೂರು ಉಪ ಕೃಷಿ ನಿರ್ದೇಶಕ ಶಿವಶಂಕರ.ಎಚ್ ದಾನೆಗೊಂಡಾರು, ಮಂಗಳೂರು ತಾ. ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು

ಸಿರಿ ಧಾನ್ಯ ಖಾರಾ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಕ್ಕೂರು ನಿವಾಸಿ ನಾರಾಯಣರಾವ್ (81) ತಮ್ಮ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸಿರಿ ಧಾನ್ಯ ಖಾರಾ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಆಗಮಿಸಿದ ಮಹಿಳಾ ಸಭಾ ಅಧ್ಯಕ್ಷೆ ವಿಜಯಲಕ್ಷ್ಮಿ. ಬಿ ಶೆಟ್ಟಿ ಮಾತನಾಡಿ, ಈ ಒಂದು ಸ್ಪರ್ಧೆಯಲ್ಲಿ ಮಹಿಳೆಯರು ಹಾಗೂ ಪುರುಷರು, ಹಿರಿಯರು ಉತ್ಸಾಹದಿಂದ ಭಾಗವಹಿಸಿದ್ದು, ವಿವಿಧ ರೀತಿಯ ರುಚಿಕರ ತಿಂಡಿ ತಿನಿಸುಗಳನ್ನು ತಯಾರಿಸಲಾಗಿದೆ. ಮಹಿಳೆಯರು ಸ್ವ-ಉದ್ಯೋಗಿಗಳಾಗಿ ಇಂತಹ ತಿಂಡಿ, ತಿನಿಸುಗಳನ್ನು ಮಾಡಿ ಮಾರಾಟ ಮಾಡುವುದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.

ಸಾವಯವ ಕೃಷಿಕ ಗ್ರಾಹಕ ಬಳಗ ಜಯಶ್ರೀ ದಯಾನಂದ್ ಸ್ಪರ್ಧೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Also Read  ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ

ಪಾಕ ಸ್ಪರ್ಧೆಯಲ್ಲಿ ತಯಾರಿಸಲ್ಪಟ್ಟ ತಿಂಡಿಗಳು :- ಸಜ್ಜೆ ಪಾಯಸ, ಬಾರ್ಲಿ ಪಾಯಸ, ನವಣೆ/ಲಾಡು, ಸಜ್ಜೆ ಲಡ್ಡು, ರಾಗಿ ಕೇಕ್, ರಾಗಿ ಸಿಹಿ ಖಾದ್ಯ, ಸಾಮೆ ಸಿಹಿ ಕಡುಬು, ಮಿಲೆಟ್ ಸ್ಮೂಧಿ, ಸಿರಿಧಾನ್ಯ ಹಲ್ವ, ಮಿಲೆಟ್ ಪುಡ್ಡಿಂಗ್, ನವಣೆ ಲಾಡು, ಸಿರಿಧಾನ್ಯ ಪೇಯ, ಸಿರಿಧಾನ್ಯ ಲಡ್ಡು, ನವಣೆ ಪಾಯಸ, ಅನ್ನದ ಖಾರ ಖಾದ್ಯ, ಬಿದಿರಿನ ಅಕ್ಕಿ /ಕಳಲೆ ಕಡುಬು, ಗೋಧಿ ದೋಸೆ, ನೆರುಗಳ ಸೊಪ್ಪು ದೋಸೆ, ಹಲಸಿನ ಹೋಳಿಗೆ, ಬೆಟ್ಟದ ನೆಲ್ಲಿಕಾಯಿ ಚಟ್ನಿ, ಹಲಸಿನ ಸೊಲೆ, ಓಂ ಕಾಳಿನ ಕರಿ, ಕಲ್ತಪ್ಪ, ಚಟ್ನಿ ಪುಂಡಿ, ನೀರುಂಡೆ (ನೀರ್ ಪುಂಡಿ), ಅಡ್ಡೆ ಸೌತೆ ಕಿಚಡಿ, ವೈಶಾಕಿ ಮಿತ್ರ, ಗೆಂಡೆದ ಅಡ್ಡೆ,  ಸೋಜಿ, ಬಾಳೆ ಎಲೆಯ ಓಡು ಅಡ್ಡೆ, ನವಣೆ & ರಾಗಿ ಚಕ್ಕುಲಿ, ಆದ್ರ ಸೊಪ್ಪು ಇಡ್ಲಿ, ಸಿಹಿಗುಂಬಳ ಇಡ್ಲಿ, ರಾಜಗಿರಿ ಹಲ್ವಾ.

ಸಿರಿ ಧಾನ್ಯ ಖಾರಾ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ವಿಭಾಗವಾರು ವಿಜೇತರು:-

ಸಿರಿಧಾನ್ಯ ಖಾರಾ ಖಾದ್ಯಗಳ ವಿಭಾಗ ಪ್ರಥಮ:- ಜಯಶ್ರಿ, ದ್ವಿತೀಯ – ಸಂಧ್ಯಾ, ತೃತೀಯ- ಗೋವಿಂದ ರಾಜೇ.

ಸಿರಿಧಾನ್ಯ ಸಿಹಿ ಖಾದ್ಯಗಳ ವಿಭಾಗ:- ಪ್ರಥಮ – ಶಶ್ಮಿ ಭಟ್, ದ್ವಿತೀಯ ರೋಹಿಣಿ, ತೃತೀಯ- ಗೀತಾ

ಮರೆತುಹೋದ ಖಾದ್ಯಗಳ ವಿಭಾಗ:- ಪ್ರಥಮ – ಸುನೀತಾ ಹರೀಶ್, ದ್ವಿತೀಯ- ಚಂದ್ರಕಲಾ, ತೃತೀಯ- ರೂಪಕಲಾ ಎಸ್. ಆಳ್ವ. ಒಟ್ಟಾರೆಯಾಗಿ ಕೃಷಿ ಇಲಾಖೆಯ ವತಿಯಿಂದ ನಡೆಸಲಾದ ಪಾಕ ಸ್ಪರ್ಧೆಯು ಭಾಗವಹಿಸಿದ್ದವರ ಮನಸ್ಸನ್ನು ಗೆದ್ದಿತ್ತು.

error: Content is protected !!
Scroll to Top