(ನ್ಯೂಸ್ ಕಡಬ) newskadaba.com ಡಿ. 02. ಕಡಬ ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಬಸ್ತಿಯಂ ಪಾಯಿಸ್ ಬಹುಮಾನ ವಿತರಿಸಿ ಮಾತನಾಡಿದರು. ಪ್ರತಿಭೆಯನ್ನು ಪುರಸ್ಕರಿಸುವ ಮೂಲಕ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಿ ಪೋಷಿಸುವ ಜವಾಬ್ದಾರಿ ವಿದ್ಯಾಸಂಸ್ಥೆಗಳ ಮೇಲಿದೆ; ಈ ಮೂಲಕ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸ್ಪೂರ್ತಿಯನ್ನು ತುಂಬಬೇಕೆಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ.ಪ್ರಕಾಶ್ ಪಾವ್ಲ್ ಡಿ’ಸೋಜ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ವಿಶಿಷ್ಟವಾದ ಪ್ರತಿಭೆ ಇರುತ್ತದೆ ವಿದ್ಯಾರ್ಥಿ ಜೀವನದಲ್ಲಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿ ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಪ್ರಾಂಶುಪಾಲರಾದ ಅಮಿತ್ ಪ್ರಕಾಶ್ ರೋಡ್ರಿಗಸ್ , ಸೈಂಟ್ ಜೋಕಿಮ್ಸ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತಾ ವೇಗಸ್ , ರಕ್ಷಕ -ಶಿಕ್ಷಕ ಸಮಿತಿಯ ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಬಿ, ವಾಚಣ್ಣ ಕೆರೆಮೂಲೆ, ಈಶ್ವರ ಕೆ, ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳಾದ ದಕ್ಷಾ ಪ್ರಸಾದ್, ಕಿರಣ್ ಕುಮಾರ್, ಶ್ರೀಲತಾ ಕೆ ಹಾಗೂ ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಉಪಸ್ಥಿತರಿದ್ದರು. ಕಾಲೇಜು ಉಪನ್ಯಾಸಕರಾದ ಮ್ಯಾಥ್ಯೂ ಇ ಜೆ ಸ್ವಾಗತಿಸಿ ,ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ವಂದಿಸಿದರು. ಕಾಲೇಜು ಉಪನ್ಯಾಸಕಿ ವಿದ್ಯಾ ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.