(ನ್ಯೂಸ್ ಕಡಬ) newskadaba.com ನ. 01. ರಾಜ್ಯ ಸರ್ಕಾರದ ಇಂಧನ ಇಲಾಖೆಯಡಿ ಕಾರ್ಯನಿರ್ವಹಿಸುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕೆಳಹಂತದ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕೆಪಿಟಿಸಿಲ್ ಹಾಗೂ ವಿವಿಧ ಎಸ್ಕಾಂಗಳಲ್ಲಿನ ಬ್ಯಾಕ್ ಲಾಗ್ ಹುದ್ದೆಗಳೂ ಸೇರಿ ಕಿರಿಯ ಸ್ಟೇಷನ್ ಪರಿಚಾರಕ (JSA) ಮತ್ತು ಜೂನಿಯರ್ ಪವರ್ ಮ್ಯಾನ್ (JPM) ಎಂಬ ಒಟ್ಟು 2,984 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ (224) ಹುದ್ದೆಗಳೂ ಸೇರಿವೆ.
ವಿದ್ಯಾರ್ಹತೆ- ಈ ಹುದ್ದೆಗಳಿಗೆ ಕರ್ನಾಟಕದಲ್ಲಿನ ಮಾನ್ಯತಾ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ತೇರ್ಗಡೆ ಅಥವಾ ಅದಕ್ಕೆ ತತ್ಸಮಾನವಾದ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬೇಕು.
ಸಿಬಿಎಸ್‌ಇ ಅಥವಾ ಇತರೆ ಬೋರ್ಡ್ ಪರೀಕ್ಷೆಗಳಿಂದ 10 ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸುವ ಹಾಗಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವವರೂ ಅರ್ಹರಲ್ಲ.
ವಯೋಮಿತಿ- ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು. ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ 35, 2ಎ, 2ಬಿ, 3ಎ, 3ಬಿ 38, ಎಸ್.ಸಿ/ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷಗಳು. ಮಾಜಿ ಸೈನಿಕರಿಗೂ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ– ಸಾಮಾನ್ಯ, 2ಎ, 2ಬಿ, 3ಎ, 3ಬಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ₹614, ಎಸ್.ಸಿ/ಎಸ್‌ಟಿ ₹378. ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ನವೆಂಬರ್ 20ರವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು https://kptcl.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಎರಡೂ ಹುದ್ದೆಗಳಿಗೂ ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆ ಇರಲಿದೆ. ಸಹನ ಶಕ್ತಿ ಪರೀಕ್ಷೆ ಪಾಸಾದವರನ್ನು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಯಾವುದೇ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ.
ನೇಮಕವಾಗುವ ಅಭ್ಯರ್ಥಿಗಳಿಗೆ ಮೂರು ವರ್ಷ ಕಡ್ಡಾಯ ಬುನಾದಿ ತರಬೇತಿ ಇರಲಿದೆ. ಈ ಅವಧಿಯಲ್ಲಿ ಗರಿಷ್ಠ ₹21 ಸಾವಿರ ಮಾಸಿಕ ವೇತನ ಮಾತ್ರ ಸಿಗಲಿದೆ. ಆ ನಂತರ ಎರಡು ವರ್ಷ ಪ್ರೊಬೇಷನರಿ ಸಮಯ ಇರಲಿದೆ. ಅಲ್ಲಿಂದ ವೇತನ ಶ್ರೇಣಿ 28,550ರಿಂದ ₹63,000 ರೂ. ಇರಲಿದೆ.
ಸಹನ ಶಕ್ತಿ ಪರೀಕ್ಷೆ ಹೇಗಿರಲಿದೆ?
8 ಮೀಟರ್ ಎತ್ತರದ ವಿದ್ಯುತ್ ಕಂಬ ಹತ್ತಬೇಕು, 14 ಸೆಕೆಂಡುಗಳಲ್ಲಿ 100 ಮೀಟರ್ ಓಟ ಓಡಬೇಕು. 1 ನಿಮಿಷಕ್ಕೆ 50 ಬಾರಿ ಸ್ಕಿಪ್ಪಿಂಗ್ ಮಾಡಬೇಕು, 8 ಮೀಟರ್ ದೂರ ಶಾಟ್ ಫುಟ್ ಎಸೆಯಬೇಕು ಹಾಗೂ 3 ನಿಮಿಷಗಳಲ್ಲಿ 800 ಮೀಟರ್ ಓಡಬೇಕು. ಇದರಲ್ಲಿ ಪ್ರತಿಯೊಬ್ಬರಿಗೂ ವಿದ್ಯುತ್ ಕಂಬ ಹತ್ತುವುದು ಕಡ್ಡಾಯ. ಇನ್ನುಳಿದ ಯಾವುದಾದರೂ ಎರಡರಲ್ಲಿ ಪಾಸಾಗಬೇಕು.