(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.19. ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸುರಿದಿದ್ದರೂ ಕುಡಿಯುವ ನೀರಿಗೆ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಟ್ಯಾಂಕರ್ ನೀರು ಪೂರೈಕೆ ಆರಂಭಿಸಲಾಗಿದೆ.
ಬಿಸಿಲಿನ ಬೇಗೆಗೆ ನೀರಿನ ಮೂಲ ಬತ್ತಿ ಹೋಗಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿಗಾಗಿ ಪರದಾಟ ಶುರುವಾಗಿದೆ. ಸಾರ್ವಜನಿಕರು ನೀರಿನ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯುತ್ತಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳೂ ಈ ಬಗ್ಗೆ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮಂಗಳೂರು ತಾಲೂಕಿನ 9 ಗ್ರಾಮಗಳಲ್ಲಿ ಈಗಾಗಲೇ ನೀರಿನ ಕೊರತೆ ತಲೆದೋರಿರುವ ಕಾರಣ ಟ್ಯಾಂಕರ್‌ನಲ್ಲಿ ನೀರು ಪೂರೈಕೆಯನ್ನು ಆರಂಭಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ, ಜಿಲ್ಲೆಯಲ್ಲಿ ಯಾವುದೇ ಕಡೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಆಯಾ ತಾಲೂಕಿನ ಇಒಗಳ ಜವಾಬ್ದಾರಿಯಾಗಿದ್ದು, ಅವರೊಂದಿಗೆ ಗ್ರಾಪಂ ಪಿಡಿಒ, ಕಾರ್ಯದರ್ಶಿ ಕೂಡ ಕೈ ಜೋಡಿಸಬೇಕಿದೆ. ಟ್ಯಾಂಕರ್‌ನಲ್ಲಿ ನೀರು ಪೂರೈಸುವುದು ಅಗತ್ಯವೆಂದು ಕಂಡುಬಂದರೆ ಅನುಮೋದನೆ ಪಡೆದು ಪೂರೈಸಲು ತಿಳಿಸಲಾಗಿದೆ ಎಂದು ಡಾ.ಎಂ.ಆರ್.ರವಿ ಹೇಳಿದ್ದಾರೆ.