(ನ್ಯೂಸ್ ಕಡಬ) newskadaba.com ಅ.21 : ಹೆಚ್ಚಿನ ಪ್ರಮಾಣದ ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಕ್ಕರೆ ಸೇವನೆಯಿಂದ ದೇಹದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಹೃದ್ರೋಗ, ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳ ಅಪಾಯ ಕೂಡ ಹೆಚ್ಚುತ್ತದೆ. ಸಕ್ಕರೆಯ ಅತಿಯಾದ ಬಳಕೆಯು ಅನಾರೋಗ್ಯಕ್ಕೆ ದಾರಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳಲ್ಲಿ ಸಂಸ್ಕರಿಸಿದ ಸಕ್ಕರೆಯ ಬಳಕೆ ವ್ಯಾಪಕವಾಗಿ ಬಿಟ್ಟಿದೆ. ಬಿಸ್ಕೆಟ್, ಸಿಹಿತಿಂಡಿಗಳು, ಚಹಾ, ಐಸ್ಕ್ರೀಂ ಹೀಗೆ ಯಾವುದೇ ಪದಾರ್ಥಗಳನ್ನು ಸಕ್ಕರೆಯ ವ್ಯಾಪಕವಾದ ಬಳಕೆಯನ್ನು ಕಾಣಬಹುದಾಗಿದೆ. ಪಾನೀಯಗಳಲ್ಲಂತೂ ಸಕ್ಕರೆಯ ಬಳಕೆ ಹೇರಳವಾಗಿ ಇರುತ್ತದೆ.ಅತಿಯಾದ ಸಕ್ಕರೆ ಸೇವನೆಯಿಂದ ದೇಹದಲ್ಲಿ ಕೆಲವೊಂದು ಬದಲಾವಣೆ ಉಂಟಾಗುತ್ತದೆ.
ನಿದ್ರೆ:
ಅತಿಯಾದ ಸಕ್ಕರೆಯ ಅಂಶಯುಕ್ತ ಪದಾರ್ಥಗಳ ಸೇವನೆ ಮಾಡುತ್ತಿದ್ದರೆ ನಿದ್ರೆಯ ಮಾದರಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ನಿದ್ರೆಗೆ ಸಂಬಂಧಿಸಿದಂತೆ ತೊಂದರೆ ಉಂಟಾಗುತ್ತದೆ.
ಆಲಸ್ಯ & ಆಯಾಸ:
ಎಲ್ಲಾ ಸಂದರ್ಭಗಳಲ್ಲಿಯೂ ಆಲಸ್ಯ ಹಾಗೂ ದಣಿವನ್ನು ಅನುಭವಿಸುತ್ತೀರಿ. ಎಷ್ಟೇ ಪ್ರಯತ್ನ ಮಾಡಿದರೂ ಸಹ ನಿಮಗೆ ಚಟುವಟಿಕೆಯಿಂದ ಕೆಲಸಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಸಕ್ಕರೆಯ ಹೆಚ್ಚಿನ ಸೇವನೆ ಇದಕ್ಕೆ ಕಾರಣವಾಗಿರಬಹುದು.
ಬೊಜ್ಜು:
ಅತಿಯಾದ ಸಕ್ಕರೆ ಸೇವನೆ ಮಾಡುವುದರಿಂದ ದೇಹದಲ್ಲಿ ಗ್ಲುಕೋಸ್ ಅಂಶದಲ್ಲಿ ಏರುಪೇರು ಉಂಟಾಗುತ್ತದೆ. ಈ ಕಾರಣದಿಂದ ಒಬ್ಬ ವ್ಯಕ್ತಿಯು ಅತಿಯಾಗಿ ಹಸಿವಿನ ಅನುಭವವನ್ನು ಹೊಂದುತ್ತಾನೆ. ಇದರಿಂದ ಮತ್ತೆ ಮತ್ತೆ ತಿನ್ನಲು ಆರಂಭಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತಲೇ ಹೋಗುತ್ತದೆ. ನೀವು ಸಕ್ಕರೆ ಸೇವನೆ ಬಿಟ್ಟಿಲ್ಲ ಎಂದಾದರೆ ನೀವು ಎಷ್ಟೇ ಡಯಟ್ ಮಾಡಿದರೂ ಸಹ ಅದು ವ್ಯರ್ಥ ಎಂದರ್ಥ.
ಹೃದಯಸಂಬಂಧಿ ಕಾಯಿಲೆ:
ಅತಿಯಾಗಿ ಸಕ್ಕರೆ ಸೇವನೆ ಮಾಡುವುದರಿಂದ ಹೃದಯದ ಅಪಧಮನಿಯ ಸುತ್ತಲಿನ ಸ್ನಾಯು ಅಂಗಾಂಶವು ಸಾಮಾನ್ಯಕ್ಕಿಂತ ಜಾಸ್ತಿ ವಿಸ್ತರಿಸಲು ಶುರು ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದ ಅಪಾಯ ಕೂಡ ಹೆಚ್ಚುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಇದು ಕೂಡ ಹೃದಯದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಅತಿಯಾದ ಸಕ್ಕರೆ ಸೇವನೆಯು ಆರೋಗ್ಯಕರ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ನ್ನು ಹೆಚ್ಚಿಸುತ್ತದೆ.