(ನ್ಯೂಸ್ ಕಡಬ) newskadaba.com ಅ.16. ಕೆಲವು ದಿನಗಳ ಹಿಂದೆ ಡೀಪ್ ಫೇಕ್ ವಿಡಿಯೋ ಮೂಲಕ ವೈರಲ್ ಆಗಿ ಸಂಚಲನ ಮೂಡಿಸಿದ್ದ, ಸದ್ಯ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
ಈ ಕುರಿತು ನಟಿ ರಶ್ಮಿಕಾ, ‘ನಾನು ಕೇಂದ್ರ ಸರ್ಕಾರದ ಜೊತೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಸೈಬರ್ ಕ್ರಿಮಿನಲ್‌ಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುವುದಾಗಿ ಹೇಳಿ ವೀಡಿಯೋ ಒಂದನ್ನು ಹಂಚಿಕೊಂಡಿರುವ ರಶ್ಮಿಕಾ ಅನೇಕ ವಿಚಾರಗಳನ್ನು ಹೇಳಿದ್ದಾರೆ. ವಿಡಿಯೋದಲ್ಲಿ , ಕೆಲವು ವರ್ಷಗಳ ಹಿಂದೆ ನನ್ನ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಗೊತ್ತೇ ಇದೆ. ಅದು ಸೈಬರ್ ಕ್ರೈಮ್. ಅದರ ನಂತರ ನಾನು ಸೈಬರ್ ಅಪರಾಧಗಳ ವಿರುದ್ಧ ಹೋರಾಡಬೇಕು ಎಂದು ಯೋಚಿಸಿದೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದುಕೊಂಡಿದ್ದೇನೆ. ನಾವು ಎಚ್ಚರವಾಗಿರುವುದು ಮಾತ್ರವಲ್ಲದೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಮತ್ತು ಸೈಬರ್ ಅಪರಾಧಗಳ ವಿರುದ್ಧ ಕೆಲಸ ಮಾಡಬೇಕು. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿ ನಾನು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸೈಬರ್ ಅಪರಾಧಗಳಿಂದ ದೇಶವನ್ನು ರಕ್ಷಿಸಬೇಕು ಎಂದು ಅವರು ಹೇಳಿದ್ದಾರೆ.