ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ಸಲಾಂ ►ಡಾ| ಮುರಲೀ ಮೋಹನ್ ಚೂಂತಾರುರವರ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಜು.01. ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ಸಲಾಮು ಜುಲೈ 1 ರಂದು ಪ್ರತಿ ವರುಷ ದೇಶಾದ್ಯಂತ ವೈದ್ಯರ ದಿನ ಎಂದು ಆಚರಿಸಲಾಗುತ್ತಿದೆ. ಇದು ಭಾರತದ ಮಹಾನ್ ಸುಪುತ್ರ. ಭಾರತರತ್ನ ಡಾ| ಬಿಷನ್ ಚಂದ್ರ ರಾಯ್ ಅವರು ಜನ್ಮವೆತ್ತ ದಿನ. ಡಾ| ಬಿ.ಸಿ. ರಾಯ್ ಅವರೊಬ್ಬರು ಮಾನವೀಯ ಕಳಕಳಿಯುಳ್ಳ ವೈದ್ಯರಾಗಿದ್ದರಲ್ಲದೆ ಅಪ್ರತಿಮ ರಾಜಕಾರಣಿ ದೇಶಭಕ್ತ ಮತ್ತು ಭಾರತ ಕಂಡ ಅತ್ಯುತ್ತಮ ವೈದ್ಯರೆಂದರೂ ತಪ್ಪಲ್ಲ. ಕಲ್ಕತ್ತಾ ವಿಶ್ವ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ  ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗವನ್ನು (FRCS & MRCP) ಕೇವಲ ಎರಡೇ ವರುಷಗಳಲ್ಲಿ ಮುಗಿಸಿ ಭಾರತದ ಬಡಜನರ ಸೇವೆಗಾಗಿ ತಾಯ್ನಾಡಿಗೆ ಮರಳಿದರು.

Poor are my patients, god pays for them ಎಂದು ಉಕ್ತಿಯನ್ನು ಜೀವನದುದ್ದಕ್ಕೂ ಅಕ್ಷರಷಃ ಪಾಲಿಸಿದರು. ಬಡವರ ನೊಂದವರ ನಿರ್ಗತಿಕರ ನೋವಿಗೆ ಸದಾ ಸ್ಪಂದಿಸಿದರಲ್ಲದೆ ತಾವು ನುಡಿದಂತೆ ಜೀವನದುದ್ದಕ್ಕೂ ಬಡ ದೀನ ದಲಿತ ವರ್ಗದವರ ಸೇವೆಗಾಗಿ ಬದುಕನ್ನು ಸವೆಸಿದರು. ಒಬ್ಬ ವೈದ್ಯರಾಗಿದ್ದುಕೊಂಡು ರಾಜಕಾರಣವನ್ನು ಪ್ರವೇಶಿಸಿ ಬಡವರಿಗಾಗಿ ಆಸ್ಪತ್ರೆಯನ್ನು ಕಟ್ಟಿಸಿದರು. ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು ಅವರ ಸಲಹೆಯಂತೆ 1945ರ ಜನವರಿ 23ರಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾದರು. ಸತತ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಬಡರೋಗಿಗಳ ನೋವು ನಲಿವು ದುಗುಡ ದುಮ್ಮಾನಗಳಿಗೆ ಯಾವತ್ತೂ ಸ್ಪಂಧಿಸಿದರು. ಹೀಗೆ ವೈದ್ಯಕೀಯ ರಾಜಕೀಯ ಸಾಮಾಜಿಕ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸಿರಿಸಿಕೊಂಡು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ತಮ್ಮ ಜೀವನವನ್ನು ಮುಡಿಪಾಗಿಡಿಸಿದರು. 1882 ಜುಲೈ1 ರಂದು ಜನಿಸಿದ ಅವರು 1962ರ ಜುಲೈ 1 ರಂದು ವಿಧಿವಶರಾದರು. ಅವರ ನಿಷ್ಕಾಮ ಮತ್ತು ನಿಸ್ವಾರ್ಥ ಸೇವೆಯ ಕುರುಹಾಗಿ 1961ರ ಫೆಬ್ರವರಿ 4ರಂದು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಭಾರತ ರತ್ನ ಪ್ರಶಸ್ತಿಯ  ಗೌರವ ಇನ್ನಷ್ಟು ಹೆಚ್ಚಾಯಿತು. ಶ್ರೀ  ಬಿ.ಸಿ ರಾಯ್ ಅವರ ಸೇವೆಯ ಸವಿ ನೆನಪಿಗಾಗಿ 1976ರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗಾಗಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಆರಂಭಿಸಲಾಯಿತು. ಇದು ಈ ಮಹಾನ್ ವ್ಯಕ್ತಿಯ ಮಾನವೀಯ  ಸೇವೆಗೆ ನೀಡಿದ ಗೌರವವೆಂದರೂ ತಪ್ಪಲ್ಲ. ಈ ಮಹಾನ್ ಚೇತನದ ಸೇವೆಯ ನೆನಪಿಗಾಗಿ ಪ್ರತೀ ವರ್ಷ ಜುಲೈ 1ರಂದು ಭಾರತದಾದ್ಯಂತ  ವೈದ್ಯರ ದಿನ ಎಂದು ಆಚರಿಸಿ ಮನುಕುಲದ ಒಳಿತಿಗಾಗಿ ಹಗಲು ರಾತ್ರಿಯಲ್ಲದೆ ಶ್ರೀ ಗಂಧ ಕೊರಡಿನಂತೆ ನಮ್ಮ ಜೀವನವನ್ನು ಸವಿಸುವ ವೈದ್ಯರನ್ನು ನೆನೆಸಿ ಸ್ಮರಿಸಿ ಗೌರವ ನೀಡಲಾಗುತ್ತದೆ. ಅದೇ ರೀತಿ ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನೆಲ್ಲಾ  ವಿಮರ್ಶಿಸಿಕೊಂಡು ಆತ್ಮಾವಲೋಕನ ಮಾಡಿಕೊಂಡು ರೋಗಿಗಳ ಸೇವೆಗೆ ತಮ್ಮನ್ನು ಪುನಃ ಅರ್ಪಿಸಿಕೊಳ್ಳುವ  ದಿನವೆಂದರೂ ತಪ್ಪಲ್ಲ.

Also Read  ವಿಶ್ವ ಆಹಾರ ದಿನ ಅಕ್ಟೋಬರ್-16 - ಡಾ. ಮುರಲೀ ಮೋಹನ ಚೂಂತಾರು

ವೈದ್ಯರಿಗಿಂದು ಆತ್ಮ ವಿಮರ್ಶೆಯ ದಿನ – ಜುಲೈ 1

ಹಿಂದೊಂದು ಕಾಲವಿತ್ತು, ‘ವೈದ್ಯೋ ನಾರಾಯಣ ಹರಿಃ’ ಎಂದು ವೈದ್ಯರನ್ನು ಪುಜಿಸಲಾಗುತ್ತಿತ್ತು. ಅದಕ್ಕೆ ತಕ್ಕಂತೆ ವೈದ್ಯರು ಕೂಡ ಮನುಷ್ಯರಾಗಿ ವರ್ತಿಸಿ ದೇವತ್ವವನ್ನು ಪಡೆದ ಉದಾಹರಣೆ ನಮ್ಮ ಮುಂದಿದೆ. ಆದರೆ ಇಂದಿನ ವ್ಯಾಪಾರೀಕರಣಗೊಂಡ  ಧಾವಂತದ ಜಗತ್ತಿನಲ್ಲಿ ಎಲ್ಲವೂ ಯಾಂತ್ರೀಕೃತ. ‘ಸರ್ವ ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಬಳಕೆಯ ಮಾತು ರೂಢಿಯಲ್ಲಿರುವ ಕಾಲಘಟ್ಟದಲ್ಲಿ ವೈದ್ಯಕೀಯವೂ ಒಂದು ವ್ಯಾಪಾರವಾಗಿ ಬಿಟ್ಟಿದೆ. ವೈದ್ಯಕೀಯ ಒಂದು ವ್ಯಾಪಾರ ಎಂದೆನಿಸಿದಾಗ ವೈದ್ಯರು ಕೋಟಿಗಟ್ಟಲೆ ಒಂದು ವ್ಯಾಪಾರ ಎಂದೆನಿಸಿದಾಗ ವೈದ್ಯರು ಕೋಟಿಗಟ್ಟಲೆ ಹಣವನ್ನು ಬಂಡವಾಳ ಹಾಕಿದರು. ಇದನ್ನು ಉದ್ದಿಮೆಯಲ್ಲಿ ತೊಡಗಿಸಿದಾಗ ನೀತಿ ಕತೆಗಳು, ಬೊಗಳೆ ಪುರಾಣ ಎನಿಸಿದರೆ ಆಶ್ಚರ್ಯವೇನಲ್ಲ. ಮಾನವೀಯತೆ, ಕರುಣೆ, ಉದಾರತೆ, ತತ್ವಸಿದ್ಧಾಂತ, ಅನುಕಂಪ ಎಂಬೆಲ್ಲಾ ಶಬ್ದಗಳು ಶಬ್ದಕೋಶದಲ್ಲಿ ತುಂಬಾ ಚೆನ್ನಾಗಿರುತ್ತದೆ. ಆದರೆ ವ್ಯವಹಾರಿಕವಾಗಿ, ವಾಸ್ತದಲ್ಲಿ ಇವುಗಳಿಗೆ ಏನೇನು ಅರ್ಥವೇ ಕಾಣುತ್ತಿಲ್ಲ. ಇದು ವ್ಯವಸ್ಥೆಯ ವ್ಯಂಗ್ಯ ವಿಡಂಬನೆ, ಅಣಕವಾಗಿ ಕಂಡು ನಮ್ಮೆದುರು ಭೂತಾಕಾರವಾಗಿ ಬಂದು ನಿಂತರೆ ಅಚ್ಚರಿಯೇನಲ್ಲ. ಎಲ್ಲವೂ ವ್ಯಾಪಾರೀಕರಣಗೊಂಡ ಈ ಜಗತ್ತಿನಲ್ಲಿ ವೈದ್ಯರೋಗಿಯ ಸಂಬಂಧ ಮೊದಲಿನಂತಿಲ್ಲ. ಅದೇ ರೀತಿ ಎಲ್ಲ ವೈದ್ಯರೂ ಮನುಷ್ಯರಾಗಿ ವರ್ತಿಸುತ್ತಿಲ್ಲ ಎಂಬ ಅಪವಾದವೂ ಇದೆ. (ದೇವರಾಗುವುದಂತೂ ಸಾಧ್ಯವಿಲ್ಲ ಬಿಡಿ) ಆಗ ಎಲ್ಲ ರೋಗಕ್ಕೂ ಒಬ್ಬನೇ ವೈದ್ಯ. ಈಗಂತೂ ಪ್ರತಿ ರೋಗಕ್ಕೊಬ್ಬರಂತೆ ವೈದ್ಯರಿದ್ದಾರೆ. ರೋಗಿಗಳಿಗಿಂತ ವೈದ್ಯರ ಸಂಖ್ಯೆಯೇ ಜಾಸ್ತಿ ಎಂದರೂ ತಪ್ಪಲ್ಲ.  ಮೊದಲೆಲ್ಲಾ ರೋಗವಿಲ್ಲದವನು ಆರೋಗ್ಯವಂತ ಎನ್ನುವ ಮಾತು ಇತ್ತು. ಈಗ ಆರೋಗ್ಯ ಎಂದರೆ ರೋಗವಿಲ್ಲದವನು ಎಂಬರ್ಥವಲ್ಲ. ಯಾರು ಮುಂಜಾನೆ ಏಳುವಾಗ ಉಲ್ಲಸಿತನಾಗಿ ಇರುತ್ತಾನೆಯೋ ಅವನೇ ನಿಜವಾದ ಆರೋಗ್ಯವಂತ ವ್ಯಕ್ತಿ. ಯಾಕೆಂದರೆ ಇಂದಿನ ಜಗತ್ತಿನಲ್ಲಿ ಎಲ್ಲರೂ ಮಧುಮೇಹಿಗಳು ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುವರೇ.  ಇಂದಿನ ಕಾಲಘಟ್ಟದಲ್ಲಿ ರೋಗಿಗಳಿಗೂ ರೋಗ ದಿನ ಬೆಳಗಾಗುವುದರೊಳಗೆ ಗುಣವಾಗಬೇಕು.

ತಾಳ್ಮೆ ಸಹನೆ ಎಂಬುದಂತೂ ಇಲ್ಲವೇ ಇಲ್ಲ. ಎಲ್ಲರೂ ಅಂತರ್ಜಾಲದ ಮೂಲಕ ಜಾಲಾಡಿ ರೋಗಗಳ ಬಗ್ಗೆ ಅರ್ಧಂಬರ್ಧ ತಿಳಿದುಕೊಂಡು ವೈದ್ಯರ ಮುಂದೆ ಜಾಣತನ ಪ್ರದರ್ಶಿಸಿ ವೈದ್ಯರ ಹಾದಿ ತಪ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸುವುದೂ ಉಂಟು.  ಹಿಂದೆ ಕೇವಲ ವೈದ್ಯರ ಸ್ಪರ್ಶದಿಂದಲೇ ರೋಗ ಗುಣಮುಖವಾಗುತ್ತಿತ್ತಂತೆ. ವೈದ್ಯರು ನಾಡಿಬಡಿತ ಪರೀಕ್ಷಿಸಿ ಸೈತಸ್ಕೋಪು ಮುಟ್ಟಿದೊಡನೆ ಅರ್ಧ ರೋಗ ವಾಸಿಯಾಗುತ್ತಿತ್ತು. ಈಗ ಅಂಥ ವೈದ್ಯರೂ ಇಲ್ಲ. ರೋಗಿಗಳೂ ಇಲ್ಲ ಯಾಕೆಂದರೆ ಇಂದು ವೈದ್ಯರು ನಾಡಿ ಬಡಿತ ನೋಡುವ ಮೊದಲೇ ರೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಅನಗತ್ಯ ಪರೀಕ್ಷೆಗೆ ಒಳಗಾಗುತ್ತಾನೆ. ರೋಗಿ ವೈದ್ಯರ ಬಳಿ ತಲುಪಿದಾಗ ರೋಗಿಯ ಎದೆಬಡಿತ ಬಹುಶಃ ವೈದ್ಯರಿಗೂ ಕೇಳಿಸುವಷ್ಟು ಜೋರಾಗಿ ಬಡಿಯುತ್ತದೆ. ಇದು ಇಂದಿನ ನಮ್ಮ ವ್ಯಾಪಾರೀಕರಣಗೊಂಡ ಆಧುನಿಕ ಜಗತ್ತಿನ ವಿಪರ್ಯಾಸವೇ ಸರಿ.  ಯಾವ ವೈದ್ಯರೂ ಈ ಅಪಾಯವನ್ನು ಕಾಲಿಗೇಳೆದುಕೊಂಡು ಲಕ್ಷಾಂತರ ರೂಪಾಯಿ ಪರಿಹಾರ ನೀಡಿ, ಕೋರ್ಟ್ ಕಚೇರಿ ಅಲೆಯುವ ಮನೋಸ್ಥಿತಿಯಲ್ಲಿ ಇಲ್ಲ. ರೋಗಿಗಳಿಗಂತೂ ಈಗಿನ ಧಾವಂತ, ವೇಗದ ಜಗತ್ತಿನಲ್ಲಿ ದಿನಬೆಳಗಾಗುವುದರೊಳಗೆ ರೋಗ ವಾಸಿಯಗಬೇಕೆನ್ನುವ ಅತೀವ ದುರಾಸೆ. ಈಗಂತೂ ವೈದ್ಯರೂ ಕೂಡ ಬಳಕೆದಾರರ ವೇದಿಕೆಯಡಿ ಬರುವ ಕಾರಣ ಯಾವ ವೈದ್ಯರೂ ಅಪಾಯ ಎಳೆದುಕೊಳ್ಳುವ ಮನೋಸ್ಥಿತಿಯಲ್ಲಿ ಇಲ್ಲ.  ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದಲ್ಲಿ ವೈದ್ಯ ಮತ್ತು ರೋಗಿಗಳ ನಡುವೆ ಸುಮಧುರ ಬಾಂದವ್ಯ ಮೂಡಲೇ ಬೇಕು. ರೋಗಿಗಳು ಕೂಡ ತಾಳ್ಮೆ ಸಂಯಮ ಕಾಯ್ದುಕೊಳ್ಳಬೇಕು. ವೈದ್ಯರ ಮೇಲೆ ಸಂಪುರ್ಣ ಭರವಸೆ ಇರಿಸಿ. ಎಲ್ಲ ಸಮಸ್ಯೆಗಳನ್ನೂ ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ದಿನ ಬೆಳಗಾಗುವುದರೊಳಗೆ ಯಾವ ವೈದ್ಯರಿಗೂ ಯಾವ ರೋಗವನ್ನು ಗುಣ ಪಡಿಸಲು ಅಸಾಧ್ಯ ಎಂಬ ಸತ್ಯವನ್ನು ರೋಗಿಗಳು ಅರಿತು ಸಂಯಮದಿಂದ ವರ್ತಿಸಿದಲ್ಲಿ ವೈದ್ಯರ ಕೆಲಸ ಸುಲಭವಾಗುವುದರಲ್ಲಿ ಎರಡು ಮಾತಿಲ್ಲ. ಅಂತರ್ಜಾಲದ ಮುಖಾಂತರ ರೋಗದ ಬಗ್ಗೆ ಕಿಂಚಿತ್ತು ಮಾಹಿತಿ ಪಡೆದು ವೈದ್ಯರ ಮುಂದೆ ನಿಮ್ಮ ಜ್ಞಾನದ ಪ್ರದರ್ಶನ ಮಾಡಿ ವೈದ್ಯರ ಹಾದಿ ತಪ್ಪಿಸಿ ಗಲಿಬಿಲಿಗೊಳಿಸುವ ಗೋಚಿಗೆ ಯಾವತ್ತೂ ಹೋಗಬೇಡಿ. ಹಾಗೆ ಮಾಡಿದಲ್ಲಿ  ರೋಗಿಯ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ಆಗಲೂ ಬಹುದು.

Also Read  ➤➤ ವಿಶೇಷ ಲೇಖನ ಮೂಕ ಪ್ರಾಣಿಗೆ ನೊಂದ ಹೃದಯಗಳು ಇಂದು ಕುರುಡಾಯಿತೇ...⁉️ ✍? ಇಸ್ಮಾಯಿಲ್ ಮಾಲೆಂಗ್ರಿ Nsm

ಕೊನೆ ಮಾತು:

ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಕ್ಷೇತ್ರದ ಪರಿಧಿಯೊಳಗೆ ಬರುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟುವುದು ಖಂಡಿತಾ ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಬನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ ಆಕ್ರಮಣ ಮಾಡುವುದು, ಹಿಂಸಾಚಾರ ಮಾಡುವುದು, ಆಸ್ಪತ್ರೆಗೆ ದಾಳಿ ಮಾಡುವುದು ಮಾನವೀಯತೆಯ ಲಕ್ಷಣವಲ್ಲ. ಯಾವೊಬ್ಬ ವೈದ್ಯರೂ ತನ್ನ ರೋಗಿ ಸಾಯಬೇಕೆಂದು ಇಚ್ಛಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಪ್ರಾಮಾಣಿಕವೆಂದು ತಿಳಿಯಬೇಕಿಲ್ಲ. ನೂರರಲ್ಲಿ ಒಬ್ಬರು ಅಪ್ರಾಮಾಣಿಕರು ಇರಲೂ ಬಹುದು. ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತರುವ ಈ ಕಾಲಘಟ್ಟದಲ್ಲಿ ವೈದ್ಯ-ರೋಗಿಯ ಸಂಬಂಧವೂ ಹಳಸಿದೆ ಎಂದರೂ ತಪ್ಪಲ್ಲ. ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಒಬ್ಬ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರದ್ದೇ ಆದ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಮನಗಾಣಬೇಕು. ಅಭಿವ್ಯಕ್ತಿ ಸ್ವಾತಂತ್ರ, ವೃತ್ತಿ ಗೌರವ ಮತ್ತು ರಾಜ ಧರ್ಮ ಎಲ್ಲಾ ವೃತ್ತಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು. ಮತ್ತು ವೈದ್ಯರೋಗಿಗಳ ನಡುವಿನ ಅನಾವಶ್ಯಕ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಲ್ಲದು. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.

Also Read  ಎಡಮಂಗಲ: ವಸತಿ ಮಂಜೂರಾತಿಯಲ್ಲಿ ಅಕ್ರಮ - ವಿಎ, ಪಿಡಿಓ ವಿರುದ್ಧ ಪ್ರಕರಣ ದಾಖಲು

ಡಾ| ಮುರಲೀ ಮೋಹನ್ ಚೂಂತಾರು

 ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787 

error: Content is protected !!
Scroll to Top