ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎನ್.ಕರುಣಾಕರ ಗೋಗಟೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ. 09. ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಕುಂತೂರು ಪದವು ಸಂತಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನ.30ರಂದು ನಡೆಯಲಿರುವ ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬರಹಗಾರ, ಸಾಮಾಜಿಕ ಮುಂದಾಳು ಎನ್.ಕರುಣಾಕರ ಗೋಗಟೆ ಹೊಸಮಠ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.

ಹಳ್ಳಿ ಬದುಕಿನ ಚಿತ್ರಣ ನೀಡುವ ಕೃತಿ ‘ಒಂದು ಸೇತುವೆಯ ಕಥೆ’ ಹಾಗೂ ಉರುಂಬಿ ಜಲ ವಿದ್ಯುತ್ ಯೋಜನೆಯ ವಿರುದ್ದ ನಡೆದ ಹೋರಾಟದ ಹಾದಿಯನ್ನು ನೆನಪಿಸುವ ‘ಉರುಂಬಿ ಸಂರಕ್ಷಣೆಯ ಯಶಸ್ಸಿನಲ್ಲಿ’ ಎನ್ನುವ ಪುಸ್ತಕಗಳನ್ನು ಬರೆದಿರುವ ಎನ್.ಕರುಣಾಕರ ಗೋಗಟೆ ಅವರು ಸಹಕಾರ ರತ್ನ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತರು. ಇವರು  ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕನ್ನಡ ಜಾನಪದ ಪರಿಷತ್ ಇದರ ಕಡಬ ತಾಲೂಕು ಸಂಚಾಲಕರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆಯ ಕಡಬ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅತ್ಯುತ್ತಮ ಭಜನಾ ಪಟುವಾಗಿ, ಪರಿಸರವಾದಿಯಾಗಿ, ಸಹಕಾರ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಕ್ಷಗಾನ, ಸಾಹಿತ್ಯ ಸಂಘಟನೆ, ಲೇಖನ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಡಬದ ಹಿರಿಯ ಸಾಹಿತಿಗಳು, ಸಂಘಟಕರು, ಕನ್ನಡ ಸಾಹಿತ್ಯ ಪರಿಷತ್ ಕಡಬ ಘಟಕದ ಸದಸ್ಯರು ಸೇರಿ ಕರುಣಾಕರ ಗೋಗಟೆ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಸೇಸಪ್ಪ ರೈ ತಿಳಿಸಿದ್ದಾರೆ.

Also Read  ಹುಲಿಗಳೊಂದಿಗೆ ಹೆಜ್ಜೆ ಹಾಕಿದ ರಮಾನಾಥ ರೈ ► ಹುಲಿಗಳ ತಾಳಕ್ಕೆ ತಕ್ಕಂತೆ ಕುಣಿದ ವೀಡಿಯೋ ನೋಡಬೇಕೆ...?

 

error: Content is protected !!
Scroll to Top