ಕಸ್ತೂರಿ ರಂಗನ್ ವರದಿ ತಿರಸ್ಕಾರ – ಸಂಪುಟ ಸಭೆಯಲ್ಲಿ ನಿರ್ಧಾರ

(ನ್ಯೂಸ್ ಕಡಬ) newskadaba.com ಸೆ.  27. ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸುವ ಬಗ್ಗೆ ಡಾ. ಕಸ್ತೂರಿ ರಂಗನ್ ವರದಿ ಆಧರಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಗುರುವಾರದಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್‌.ಕೆ ಪಾಟೀಲ್, “ಈ ಹಿಂದಿನ ಬಿಜೆಪಿ ಸರ್ಕಾರ ವರದಿಯನ್ನು ತಿರಸ್ಕರಿಸಿ ಕೈಗೊಂಡಿದ್ದ ನಿರ್ಣಯವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ” ಎಂದಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸಲು ಕೇಂದ್ರ ಸರ್ಕಾರ ಜುಲೈ 31, 2024ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು. 60 ದಿನಗಳಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ರಾಜ್ಯಗಳಿಗೆ ಸೂಚಿಸಿತ್ತು.

ಕಸ್ತೂರಿ ರಂಗನ್ ವರದಿಯು ಕರ್ನಾಟಕದ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು. ಇದರಲ್ಲಿ ಆಗಿದ್ದ ಕೆಲ ಲೋಪಗಳನ್ನು ತಿದ್ದುಪಡಿ ಮಾಡಿ, 19, 252.70 ಚದರ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿತ್ತು. ರಾಜ್ಯದ ವಿವಿಧ ಅರಣ್ಯ ಕಾನೂನುಗಳ ಅಡಿಯಲ್ಲಿ ಈಗಾಗಲೇ 16,164 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಆದ್ದರಿಂದ ಕರಡು ಅಧಿಸೂಚನೆ ತಿರಸ್ಕರಿಸಲಾಗಿದೆ ಎಂದು ಹೆಚ್.ಕೆ ಪಾಟೀಲ್ ವಿವರಿಸಿದ್ದಾರೆ.

Also Read  ಉಡುಪಿ :ಆರಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

ಜುಲೈ 31, 2024ರ ಆರನೇ ಕರಡು ಅಧಿಸೂಚನೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಗುರುತಿಸಿತ್ತು. ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದ ಕೇಂದ್ರ, ವಯನಾಡ್‌ ಭೂಕುಸಿತ ದುರಂತ ಸಂಭವಿಸಿದ ಬಳಿಕ 6ನೇ ಅಧಿಸೂಚನೆ ಪ್ರಕಟಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯನ್ನು ಗುರುತಿಸುವ ವಿಚಾರದಲ್ಲಿ ಕೇಂದ್ರ ಮತ್ತು ಆರು ರಾಜ್ಯಗಳು ಇದುವರೆಗೆ ಒಮ್ಮತಕ್ಕೆ ಬಂದಿಲ್ಲ. ಕಸ್ತೂರಿ ರಂಗನ್ ವರದಿ ಆಧರಿಸಿ ಗುಜರಾತ್‌ನ 449 ಚದರ ಕಿ.ಮೀ, ಮಹಾರಾಷ್ಟ್ರದ 17,340, ಗೋವಾದ 1,461, ಕರ್ನಾಟಕದ 20,668 ತಮಿಳುನಾಡಿನ 6,914 ಮತ್ತು ಕೇರಳದ 9,994 ಚದರ ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಗುರುತಿಸಿದೆ.

error: Content is protected !!
Scroll to Top