(ನ್ಯೂಸ್ ಕಡಬ) newskadaba.com ಸೆ. 26. ಇನ್ನು 15 ದಿನಗಳಲ್ಲಿ ರಾಜ್ಯದ ಅರ್ಹ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಹೇಳಿದರು.
ಈ ಕುರಿತು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 6,500 ಗ್ರಾಮೀಣ ಪತ್ರಕರ್ತರಿದ್ದಾರೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇನ್ನು 15ರಿಂದ 20 ದಿನಗಳಲ್ಲಿ ಈ ಕುರಿತು ಅಂತಿಮ ಆದೇಶ ಹೊರಬರಲಿದೆ. ರಾಜ್ಯದ ಪತ್ರಕರ್ತರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು 10 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಸುವರ್ಣ ಆರೋಗ್ಯ ಟ್ರಸ್ಟ್‌ನ ಹಲವು ಷರತ್ತು ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಆ ಮೊತ್ತ ಈವರೆಗೂ ಖರ್ಚಾಗಿಲ್ಲ. ಆದ್ದರಿಂದ ಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿದ ಪತ್ರಕರ್ತರಿಗೆ ಮಾತ್ರ ಎಂಬ ಷರತ್ತನ್ನು ತೆಗೆದು ಹಾಕಲು ಮುಖ್ಯಮಂತ್ರಿಗೆ ವಿನಂತಿಸಲಾಗಿದೆ. ಆ ಕಾರ್ಯವೂ ಶೀಘ್ರವೇ ಆಗಲಿದೆ ಎಂದರು.