(ನ್ಯೂಸ್ ಕಡಬ) newskadaba.com ಸೆ. 24. ಅಮೀಬಿಕ್ ಮೆನಿಂಗೋ ಎನ್ ಸೆಫಲೈಟಿಸ್ ಎಂದು ಆಂಗ್ಲ ಬಾಷೆಯಲ್ಲಿ ಕರೆಯಲ್ಪಡುವ, ಮೆದುಳು ತಿನ್ನುವ ಅಮೇಬಾ ಎಂದು ಆಡುಬಾಷೆಯಲ್ಲಿ ಕುಖ್ಯಾತಿ ಪಡೆದಿರುವ ರೋಗ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಬಹಳಷ್ಟು ಸುದ್ದಿಮಾಡುತ್ತಿದೆ. ಅಮೀಬಾ ಎನ್ನುವುದು ಏಕಕೋಶಜೀವಿಯಾಗಿದ್ದು ಪರಾವಲಂಬಿ ಜೀವಿಯಾಗಿರುತ್ತದೆ. ಇತರ ಜೀವಿಗಳ ಸಹಾಯವಿಲ್ಲದೆ ಅದು ಬದುಕಲಾರದು. ಮೆದುಳಿನ ಉರಿಯೂತಕ್ಕೆ ಕಾರಣವಾಗಿ, ಮಾರಣಾಂತಿಕವಾಗಿ ಕಾಡುವ ಈ ಅಮೀಬಾ ಗುಂಪಿನ ನೆಗ್ಲೇರಿಯ ಫೌಲೇರಿ ಎಂಬ ಪರಾವಲಂಬಿ ಜೀವಿ ಹೆಚ್ಚಾಗಿ ಕಲುಷಿತ ಹೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಅಭಿವೃಧ್ದಿ ಹೊಂದುತ್ತದೆ. ನಿರ್ವಹಣೆ ಕೊರತೆ ಇರುವ ಈಜುಕೊಳದಲ್ಲಿಯೂ ಇರುತ್ತದೆ. ಈಜಾಡುವಾಗ ಮತ್ತು ಮೇಲಿನಿಂದ ನೀರಿನೊಳಗೆ ಧುಮುಕುವಾಗ ಮತ್ತು ಇನ್ನಿತರ ಕಾರಣಗಳಿಂದ ಮೂಗಿನ ಮುಖಾಂತರ ಈ ಜೀವಿ ಮನುಷ್ಯನ ದೇಹ ಪ್ರವೇಶಿಸಿ ಮೆದುಳನ್ನು ಸೇರಿ ಪ್ರಾಣಕ್ಕೆ ಕುತ್ತು ತರುವ ಮಾರಣಾಂತಿಕ ಮೆದುಳಿನ ಉರಿಯೂತ ಮತ್ತು ಬೆನ್ನು ಹುರಿಯ ಪೊರೆಯ ಉರಿಯೂತಕ್ಕೆ ಕಾರಣವಾಗುತ್ತದೆ.. ಈ ರೋಗಾಣುವಿನಿಂದ ಸೋಕಿತರಾದ 98 ಶೇಕಡಾ ಮಂದಿ ಸಾವಿಗೀಡಾಗಿದ್ದಾರೆ. ಮತ್ತು ನಮ್ಮ ದೇಹ ಸೇರಿದ 14ರಿಂದ 18 ದಿನದ ಒಳಗೆ ಸಾವು ಸಂಭವಿಸುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಈ ಸೋಂಕು ರಕ್ತದ ಮುಖಾಂತರ ವೇಗವಾಗಿ ವ್ಯಾಪಿಸುತ್ತದೆ ಮತ್ತು ನರಗಳ ಮೇಲೆ ನೇರ ದಾಳಿ ನಡೆಯುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಜೀವ ಉಳಿಸಲು ಸಾಧ್ಯವಾಗಬಹುದು. ಮೊದಲಬಾರಿಗೆ ಈ ಸೋಂಕು ಆಸ್ಟ್ರೇಲಿಯ ಅಡಿಲೇಡಿನಲ್ಲಿ 1961-65ರಲ್ಲಿ ಕಾಣಿಸಿಕೊಂಡು 4 ಮಂದಿ ಮೃತರಾಗಿದ್ದರು. ಫೌಲೇರಿ ಎಂಬಾತ ಈ ಕಾಯಿಲೆಗೆ ಕಾರಣವಾದ ಫೌಲೇರಿ ಅಮಿಬಾವನ್ನು ಕಂಡುಹಿಡಿದಿರುತ್ತಾರೆ. ನಿಂತ ಕಲುಷಿತ ನೀರು ಕಲುಷಿತಗೊಂಡ ಜಲಮೂಲಗಳಲ್ಲಿ ಈ ಅಮೀಬಾ ಹೆಚ್ಚು ಕಾಣಿಸುತ್ತದೆ. ಬೆಚ್ಚಗಿನ ನೀರಿನಲ್ಲಿ ಈ ಪ್ರಬೇದದ ಅಮೀಬಾ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ. 40ರಿಂದ 45 ಡಿಗ್ರಿ ಸೆಲ್ಸಿಯಸ್‌ನ ಉಷ್ಣತೆಯಲ್ಲಿ ಈ ಅಮೀಬಾ ಬದುಕುತ್ತದೆ. ಆದರೆ ಸಮುದ್ರದ ಉಪ್ಪು ನೀರಿನಲ್ಲಿ ಬದುಕುವುದಿಲ್ಲ. ಮಕ್ಕಳಲ್ಲಿ ಆದರಲ್ಲೂ 10 ರಿಂದ 15 ವರ್ಷದ ಮಕ್ಕಳಲ್ಲಿ ಈ ರೋಗ ಹೆಚ್ಚು ಕಂಡುಬರುತ್ತದೆ. ಸಾಂಕ್ರಾಮಿಕವಲ್ಲದ ಈ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಅಮೀಬಾ ಇರುವ ನೀರು ಕುಡಿಯುವುದರಿಂದಲೂ ಹರಡಲು ಸಾಧ್ಯವಿಲ್ಲ.
ರೋಗದ ಲಕ್ಷಣಗಳು-
ಜ್ವರ, ತಲೆನೋವು, ವಾಂತಿ, ಸುಸ್ತು, ವಾಕರಿಕೆ ಮತ್ತು ಕುತ್ತಿಗೆ ನೋವು ಆರಂಬಿಕವಾಗಿ ಕಾಣಿಸುತ್ತದೆ. ಮುಂದುವರಿದ ಹಂತದಲ್ಲಿ ರೋಗ ಲಕ್ಷಣಗಳು ತೀವ್ರವಾಗಿ ಕಾಡುತ್ತದೆ. ಅತಿಯಾದ ತಲೆನೋವು, ಅಪಸ್ಮಾರ, ಏಕಾಗ್ರತೆಯ ಕೊರತೆ, ದೃಷ್ಟಿ ಮಂದವಾಗುವುದು, ಮುಖದಲ್ಲಿ ಗುಳ್ಳೆಗಳು, ಮಾನಸಿಕ ಗೊಂದಲ, ಅಸ್ಥಿರತೆ, ಭ್ರಮೆ ಮತ್ತು ಬ್ರಾಂತಿ ಹುಚ್ಚಾಟ ಎಲ್ಲವೂ ಒಟ್ಟಾಗಿ ಕಾಣಿಸಿಕೊಂಡು ಕೊನೆ ಹಂತದಲ್ಲಿ ಕೋಮಾಕ್ಕೆ ತಲುಪುತ್ತಾರೆ. ಗಾಳಿ, ನೀರು, ಆಹಾರ ಮತ್ತು ದೈಹಿಕವಾದ ನಿಕಟ ಸಂಪರ್ಕದಿಂದ ರೋಗ ಹರಡುತ್ತದೆ. ಎಂದು ತಿಳಿಯಲಾಗಿದೆ.
ಪತ್ತೆ ಹಚ್ಚುವುದು ಹೇಗೆ?
ಸೋಂಕಿತ ವ್ಯಕ್ತಿಯ ರೋಗದ ಚರಿತ್ರೆ ದಾಖಲಾತು ಮಾಡಿ ಸೂಕ್ಷ್ಮವಾಗಿ ದೇಹ ಪರಿಶೀಲನೆ ಮಾಡಬೇಕಾಗುತ್ತದೆ. ಮಲ ಪರೀಕ್ಷೆ, ಬೆನ್ನು ಹುರಿಯ ದ್ರವದ ಪರೀಕ್ಷೆ ಅಥವಾ CSF ಪರೀಕ್ಷೆ ಮಾಡಿ ಈ ಅಮೀಬಾದ ಇರುವಿಕೆಯನ್ನು ಪತ್ತೆ ಹಚ್ಚಲಾಗುತ್ತದೆ. PCR ಅಥವಾ ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂಬ ಪರೀಕ್ಷೆ ಮುಖಾಂತರ ಆಂಟಿಬಾಡಿ ಪತ್ತೆ ಹಚ್ಚಿ ರೋಗ ನಿರ್ಣಯ ಮಾಡಲಾಗುತ್ತದೆ.
ಏನು ಮುಂಜಾಗರೂಕತೆ ವಹಿಸಬೇಕು?
ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಇರುವ ವಾತಾವರಣ ಅಮೀಬಾದ ಬೆಳವಣಿಗೆಗೆ ರಕವಾಗಿರುತ್ತದೆ. ಸಮುದ್ರ ತೀರದ ರಾಜ್ಯಗಳಲ್ಲಿ ಈ ರೀತಿಯ ವಾತಾವರಣ ಹೆಚ್ಚು ಇರುತ್ತದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಈ ರೋಗ ಕಾಣಸಿಗುತ್ತದೆ. ಮಳೆಗಾಲದಲ್ಲಿ ಕೆರೆ ಹಳ್ಳಿಗಳು ತುಂಬಿ ಹರಿದು ಜನರು ನದಿ, ಕೆರೆ ಹಳ್ಳ-ತೋಡುಗಳಲ್ಲಿ ಸ್ನಾನ ಮಾಡುವುದು ಬಟ್ಟೆ ಒಗೆಯುವುದು ಮತ್ತು ಪಾತ್ರೆ ತೊಳೆಯುವುದು ಮಾಡುವುದರಿಂದ ಅಮೀಬಾ ದೇಹಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿರುತ್ತದೆ.
೧. ಕಲುಷಿತ ಕೆರೆ, ತೊರೆ, ನದಿ, ತೋಡುಗಳಲ್ಲಿ ಸ್ನಾನ ಮಾಡುವುದು.
೨. ಮಲಿನವಾಗಿರುವ ನೀರಿನಲ್ಲಿ ಈಜಡಬಾರದು.
೩. ನೀರಿನ ಥೀಮ್ ಪಾರ್ಕ್ ಮತ್ತು ಈಜುಕೊಳಗಳನ್ನು ನಿರಂತರವಾಗಿ ಕ್ಲೋರಿನ್ ಬಳಸಿ ಶುಚಿಗೊಳಿಸುತ್ತಿರಬೇಕು.
೪. ಮಳೆಗಾಲದಲ್ಲಿ ಹೆಚ್ಚು ನೀರಿನ ಕ್ರೀಡೆಗಳನ್ನು ಆಡಬಾರದು.
೫. ನೀರಿನಲ್ಲಿ ಆಟವಾಡುವಾಗ ಸಾಕಷ್ಟು ಮುಂಜಾಗರೂಕತೆ ವಹಿಸಬೇಕು.
ಚಿಕಿತ್ಸೆ ಹೇಗೆ?
ರೋಗಿಯನ್ನು ಒಳರೋಗಿಯಾಗಿ ದಾಖಲಿಸಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರಕ್ತನಾಳಗಳ ಮುಖಾಂತರ ಆಂಟಿಬಯಾಟಿಕ್, ಸ್ಟಿರಾಯ್ಡ್ ಮತ್ತು ಪೋಷಕಾಂಶಯುತ್ತ ದ್ರಾವಣಗಳನ್ನು ನೀಡಲಾಗುತ್ತದೆ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ಔಷಧಿ ನೀಡಿ ಆರೈಕೆ ಮಾಡಲಾಗುತ್ತದೆ. ಆಂಪೋಟಿರಿಸ್ನ್ ಬಿ, ಅಜಿತ್ರೋಮೈಸಿನ್ ಮುಂತಾದ ಔಷಧಿಯನ್ನು ಹೆಚ್ಚು ಬಳಸಲಾಗುತ್ತದೆ. ಇಷ್ಟರವರೆಗೆ ವರದಿಯಾದ 500ಕ್ಕಿಂತಲೂ ಹೆಚ್ಚು ಅಮೀಬಿಕ್ ಎನ್‌ಸೆಫಲೈಟಿಸ್ ರೋಗದಿಂದ ಬದುಕುಳಿದವರು ಡಜನ್ ಮಂದಿ ಮಾತ್ರ. ಅಮೇರಿಕಾದಲ್ಲಿ 1962 ರಿಂದ 2021ರ ವರೆಗೆ ವರದಿಯಾದ 154 ಮಂದಿಯಲ್ಲಿ 4 ಮಂದಿ ಮಾತ್ರ ಬದುಕಿರುತ್ತಾರೆ.
ಕೊನೆ ಮಾತು:
ನೆಗ್ಲೇರಿಯಾ ಪೌಲೇರಿ ಎಂಬ ಅಮಿಬಾ ಮೆದುಳನ್ನು ತಿನ್ನುವುದಿಲ್ಲ. ಆದರೆ ಮೆದುಳು ಮತ್ತು ಮೆದುಳಿನ ಪೊರೆಯ ಉರಿಯೂತಕ್ಕೆ ಕಾರಣವಾಗಿ ಮಾರಣಾಂತಿಕವಾಗಿ ಕಾಡುತ್ತದೆ. ಕ್ಲೋರಿನ್ ದ್ರಾವಣಕ್ಕೆ ಈ ಅಮೀಬಾ ಬಹಳ ಸುಲಭವಾಗಿ ಶರಣಾಗುತ್ತದೆ. ಮತ್ತು 9 ನಿಮಿಷದಲ್ಲಿ ಸಾಯುತ್ತದೆ. ಇತ್ತೀಚಿನ ದಿನಗಳಲ್ಲಿ ಕೇರಳದ ಮಲಪ್ಪುರಂ, ಕೋಝಿಕೋಡ್‌ಗಳಲ್ಲಿ ಮೂರು ಮಕ್ಕಳ ಸಾವಿಗೆ ಕಾರಣವಾದ ಈ ರೋಗ ಮಗದೊಮ್ಮೆ ಸುದ್ದಿ ಮಾಡುತ್ತದೆ. ಅಂಬಾರ್ ಪಂಕ್ಚರ್ ಮುಖಾಂತರ ಬೆನ್ನಹುರಿದ್ರವ್ಯದಲ್ಲಿ ಅಮೀಬಾ ಪತ್ತೆ ಹಚ್ಚಿ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿದಲ್ಲಿ ರೋಗಿಯ ಪ್ರಾಣ ಉಳಿಸಲು ಸಾಧ್ಯವಾಗಬಹುದು. ಒಟ್ಟಿನಲ್ಲಿ ಮಾರಣಾಂತಿಕವಾಗಿರುವ ಈ ಅಮೀಬಾದ ಸಂಪರ್ಕ ಬಾರದಂತೆ ಮುಂಜಾಗರೂಕತೆ ವಹಿಸುವುದರಲ್ಲಿಯೇ ಜಾಣತಣ ಅಡಗಿದೆ.
ಡಾ||ಮುರಲೀಮೋಹನ್‌ಚೂಂತಾರು