(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 19. ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಒದಗಿಸಿಕೊಡುವಂತೆ ಮಂಡಳಿಯ ಅಧ್ಯಕ್ಷರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ನಿನ್ನೆ ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯಯನವರು ಜನ್ಮದಿನದ ಶುಭಾಶಯ ತಿಳಿಸಿ ನಾಲಾ ಯೋಜನೆಯ ಬಗ್ಗೆ ವಿವರವಾಗಿ ಬರೆದಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ. ಅದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು (ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರ ನಾಲಾದಿಂದ 2.18 ಟಿಎಂಸಿ) ರಾಜ್ಯ ಸರ್ಕಾರವು 16-06-2022 ರಂದು CWC ಗೆ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ (ಲಿಫ್ಟ್ ಯೋಜನೆಗಳು) ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರದಿ ಸಲ್ಲಿಕೆ ಕುರಿತ ಪೋರ್ಟಲ್ ಸಂಖ್ಯೆಯನ್ನೂ ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.