(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.05. ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ “ಆರೋಗ್ಯ ಕರ್ನಾಟಕ’ ಯೋಜನೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ರಾಜ್ಯದ 10 ಪ್ರಮುಖ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೊಂಡಿದೆ.
ಇದೀಗ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲೂ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊರ ತಂದಿರುವ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಫಲಾನುಭವಿಗಳಿಗೆ ಹೆಲ್ತ್ ಕಾರ್ಡ್ ವಿತರಿಸುವ ಮೂಲಕ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರು ಚಾಲನೆ ನೀಡಿದ್ದಾರೆ. ರಾಜ್ಯದ 1.43 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ರಾಜ್ಯದ 10 ಪ್ರಮುಖ ಆಸ್ಪತ್ರೆಗಳಾದ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪಿಎಂಎಸ್‌ಎಸ್‌ವೈ ಆಸ್ಪತ್ರೆ, ವಿಕ್ಟೋರಿಯಾ ಕ್ಯಾಂಪಸ್, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ. ಇದೀಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯೂ ಈ ಆಸ್ಪತ್ರೆಗಳ ಸಾಲಿಗೆ ಸೇರಿದೆ.
ಈ ಯೋಜನೆಯಡಿ ಅರ್ಹತಾ ವರ್ಗದ ರೋಗಿಗಳಿಗೆ (ಬಿಪಿಎಲ್) ಸರ್ಕಾರಿ ಮತ್ತು ರೆಫರಲ್ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಸಿಗಲಿದೆ. ಸಾಮಾನ್ಯ ವರ್ಗದ ರೋಗಿಗಳಿಗೆ (ಎಪಿಎಲ್) ಸಹ ಪಾವತಿ ಆಧಾರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಅರ್ಹತಾ ವರ್ಗದ ರೋಗಿಗಳಿಗೆ ನಿಗದಿತ ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಐವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ. 30,000ವರೆಗಿನ ಚಿಕಿತ್ಸಾ ಸೌಲಭ್ಯವಿದೆ. ನಿಗದಿತ ತೃತೀಯ ಹಂತದ ಚಿಕಿತ್ಸೆಗೆ ಪ್ಯಾಕೇಜ್ ಆಧಾರದಲ್ಲಿ ಐವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ. 1.50 ಲಕ್ಷದವರೆಗೆ ಮತ್ತು ಈ ಹಣ ಮುಗಿದ ನಂತರ ತುರ್ತು ಸಂದರ್ಭದ ಚಿಕಿತ್ಸೆಗೆ ಹೆಚ್ಚುವರಿಯಾಗಿ ರೂ. 50,000ವರೆಗಿನ ಚಿಕಿತ್ಸೆ ಸಿಗಲಿದೆ. ಆದರೆ, ಸಾಮಾನ್ಯ ರೋಗಿಗಳಿಗೆ ದ್ವಿತೀಯ ಮತ್ತು ತೃತೀಯ ಹಂತದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪ್ಯಾಕೇಜ್ ದರಗಳ ವೆಚ್ಚ ಅಥವಾ ಚಿಕಿತ್ಸಾ ವೆಚ್ಚದ ಪೈಕಿ ಯಾವುದು ಕಡಿಮೆಯೋ ಅದರ ಶೇ 30ರಷ್ಟು ಹಣವನ್ನು ಸರ್ಕಾರ ಮರು ಪಾವತಿಸಲಿದೆ. ಶೇ 70ರಷ್ಟು ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ಸದ್ಯ ಜಾರಿಯಲ್ಲಿರುವ ಯಶಸ್ವಿನಿ ಯೋಜನೆಯಲ್ಲಿ ಕುಟುಂಬದ ಒಬ್ಬ ವ್ಯಕ್ತಿಗೆ ರೂ. 2 ಲಕ್ಷ ಚಿಕಿತ್ಸಾ ವೆಚ್ಚ ಸೌಲಭ್ಯವಿದೆ. ಈ ಯೋಜನೆ ಇದೇ ಮೇ 31ಕ್ಕೆ ಅಂತ್ಯವಾಗಲಿದೆ.
ಚಿಕಿತ್ಸೆ ಹೇಗೆ…?
ಮೊದಲು ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ ಸಮೀಪದ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಲ್ಲೂ ಚಿಕಿತ್ಸೆ ಲಭ್ಯ ಇಲ್ಲದಿದ್ದರೆ ದ್ವಿತೀಯ ಹಂತದ ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆ ಪೈಕಿ ರೋಗಿ ಬಯಸಿದ ಆಸ್ಪತ್ರೆಗೆ ಹೋಗಲು ಅವಕಾಶವಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಸರ್ಕಾರದ ಆದೇಶದ ಪಟ್ಟಿಯಲ್ಲಿರುವ ನೋಂದಾಯಿತ ಖಾಸಗಿ ಆಸ್ಪತ್ರೆಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ.