ವೃದ್ದರೊಬ್ಬರ ಅಸಹಾಯಕ ಕುಟುಂಬದ ಮೃತದೇಹವನ್ನು ಸಾಗಿಸಲು ತಾವೇ ಹೆಗಲುಗೊಟ್ಟ ಸಬ್ ಇನ್ಸ್‌ಪೆಕ್ಟರ್ ► ಕಡಬ ಪೊಲೀಸರ ಮಾನವೀಯತೆಗೆ ವ್ಯಕ್ತವಾಗುತ್ತಿದೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ವೃದ್ಧರೋರ್ವರು ಗುಡ್ಡದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ಶನಿವಾರದಂದು ನಡೆದಿದೆ.

ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಂಬದ ಹಳ್ಳಿ ನಿವಾಸಿ ಪಲನಿ ಸ್ವಾಮಿ ಎಂಬವರ ಪುತ್ರ ಅಸಲಪ್ಪ (80) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವ ಕಾಯಕದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ ಇವರ ಪುತ್ರ ಇಲ್ಲಿನ ಮಹಿಳೆಯೋರ್ವರನ್ನು ವಿವಾಹವಾಗಿದ್ದರೆನ್ನಲಾಗಿದೆ. ತನ್ನ ಮಗನ ಮನೆಗೆಂದು ಆಗಮಿಸಿದ್ದ ಮೃತರು ಶುಕ್ರವಾರದಂದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತೀರಾ ಬಡಕುಟುಂಬದವರಾದುದರಿಂದ ಕುಟುಂಬಸ್ಥರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮತ್ತು ಊರಿನಲ್ಲಿ ಭಾನುವಾರದಂದು ದೈವದ ನೇಮ ಇದ್ದುದರಿಂದ ಗ್ರಾಮದ ಜನ ಹೆಣ ಮುಟ್ಟಲು ಹಿಂಜರಿದಿದ್ದರಿಂದ ಮೃತದೇಹವನ್ನು ಸಾಗಿಸಲು ಜನವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ, ಎಎಸ್ಐ ರವಿ ಮತ್ತು ಹೋಂಗಾರ್ಡ್ ಸಂದೇಶ್ ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಮನೆತನಕ ಸಾಗಿಸಲು ನೆರವಾಗಿದ್ದಾರೆ. ಪೊಲೀಸರ ಈ ಮಾನವೀಯತೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

Also Read  ಶಾಲಾ ಮಕ್ಕಳಿಗೆ ಸಿಗಲಿದೆ ಕೆನೆಭರಿತ ಹಾಲಿನ ಪುಡಿ

error: Content is protected !!
Scroll to Top