(ನ್ಯೂಸ್ ಕಡಬ) newskadaba.com ಚಿಕಾಗೋ, ಸೆ. 11. ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆಯನ್ನು ಇಲಿನಾಯ್ಸ್ ನ ಹಾಫ್ಮನ್ ಎಸ್ಟೇಟ್ ನಲ್ಲಿರುವ ಸೇಂಟ್ ಹಬರ್ಟ್ಸ್ ಚರ್ಚ್ ಹಾಲ್ ನಲ್ಲಿ ಆಚರಿಸಲಾಯಿತು.
ಎಂಕೆಸಿಎ ಅಧ್ಯಕ್ಷ ಲಿಯೊನಾರ್ಡ್ ಲೋಬೊ ಸ್ವಾಗತಿಸಿ, ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ಇತಿಹಾಸವನ್ನು ಸಭಿಕರಿಗೆ ಪರಿಚಯಿಸಿ ಸಂಸ್ಥೆಯು ನಡೆಸಿದ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿಯ ಕೊಡುಗೆಗಳನ್ನು ಕೊಂಡಾಡಿದರು. MKCA ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಆಸ್ಟಿನ್ ಪ್ರಭು ಮಾತನಾಡಿ, ಸಂಸ್ಥೆಯ ಹುಟ್ಟಿನ ಕಾರಣಗಳು, ಭಾರತದಲ್ಲಿ ಈ ಮೊಂತಿ ಫೆಸ್ಟ್ ಹಬ್ಬವನ್ನು ಹೇಗೆ ಆಚರಿಸಲಾಯಿತು ಎಂಬುದನ್ನು ವಿವರಿಸಿದರು. ಬಳಿಕ ಮಕ್ಕಳು ಮತ್ತು ವಯಸ್ಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಸಿದ ಸಂಸ್ಥೆಯ ಹಾಲಿ ಕಾರ್ಯದರ್ಶಿ ಸವಿಯೋ ಪಾಯಸ್ ವಂದಿಸಿ, ಸ್ಥಳಾವಕಾಶ ನೀಡಿದ ಪ್ಯಾರಿಷ್ ಧರ್ಮಗುರು ರೆ.ಫಾ. ಟಾಮ್ ಅಬ್ರಹಾಂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಭಾಗದ ವಿವಿಧ ರೀತಿಯ ಸಾಂಪ್ರದಾಯಿಕ ಆಹಾರವನ್ನು ಸದಸ್ಯರೇ ತಯಾರಿಸಿದ್ದು ವಿಶೇಷವಾಗಿತ್ತು. ಆಹಾರ ತಯಾರಿಸಿದ ಸಂಸ್ಥೆಯ ಸದಸ್ಯರಿಗೆ ಫಾ. ಟಾಮ್ ಅಬ್ರಹಾಂ ಶುಭ ಹಾರೈಸಿದರು. ಬಳಿಕ ಎಲ್ಲರೂ ಜೊತೆಯಾಗಿ ಸಾಂಪ್ರ‍್ರದಾಯಿಕ ಭೋಜನ ಸೇವಿಸಿದರು. ಕ್ವೀನಿ ಮೆಂಡೋನ್ಕಾ ಅವರಿಂದ ಸಂಯೋಜಿಸಲ್ಪಟ್ಟ ಡಿಜಿಂಗ್ ನ ಕೊಂಕಣಿ, ಹಿಂದಿ ಮತ್ತು ಸ್ಪ್ಯಾನಿಷ್ ಹಾಡುಗಳ ಟ್ಯೂನ್ ಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.