(ನ್ಯೂಸ್ ಕಡಬ) newskadaba.com ಕಡಬ, ಮಾ.01. ಆ ಬಾಲಕನನ್ನು ನೋಡಿದರೆ ಕರುಳು ಕಿತ್ತು ಬರುವ ವೇದನೆಯಾಗುತ್ತದೆ. ಎಲ್ಲರೊಂದಿಗೆ ಆಟ, ಪಾಠದಲ್ಲಿ ಕಾಲ ಕಳೆಯಬೇಕಿದ್ದ ಆ ಆರರ ಪ್ರಾಯದ ಸುಂದರ ಬಾಲಕ ಅಸಹಾಯಕನಾಗಿ ಚಾಪೆ ಹಿಡಿದು ಮಲಗಿದ್ದರೆ, ಇರುವ ಓರ್ವ ಪುತ್ರನ ಸ್ಥಿತಿಯನ್ನು ಅರಗಿಸಿಕೊಳ್ಳಲಾರದೆ ಮನಸ್ಸಿನಲ್ಲೇ ಸಂಕಟಪಡುತ್ತಿರುವ ಆ ಬಡ ಕುಟುಂಬ.
ಆ ಮುದ್ದಾದ ಬಾಲಕ ಕಡಬ ಗ್ರಾಮದ ಪಿಜಕಳ ನಿವಾಸಿ ಚಂದ್ರಶೇಖರ ನಾಯ್ಕ, ಲತಾ ದಂಪತಿಯ ಏಕೈಕ ಪುತ್ರ ತೇಜಸ್. ಈತನಿಗೆ ಕಳೆದ ಎರಡುವರೆ ವರ್ಷಗಳಿಂದ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಯಾವುದೇ ಫಲಕಾರಿಯಾಗದೆ ಕೈಚೆಲ್ಲಿ ಕೂತಿದೆ ಆ ದಂಪತಿ. ಎಲ್ಲಾ ಪ್ರಯತ್ನ ಮಾಡಿ ಈ ಸೋತು ಸುಣ್ಣವಾಗಿ ಕಣ್ಣೀರಿಡುತ್ತಿದ್ದಾರೆ. ಈ ಕುಟುಂಬದ ಹಿರಿಯ ಜೀವಿ ಆನಂದ ನಾಯ್ಕ. ಈ ಕುಟುಂಬಕ್ಕೆ ಬಡತನ ಸಂಕಷ್ಟಗಳು ಎನ್ನುವುದು ಬಳುವಳಿಯಾಗಿ ಬಂದ ಹಾಗಿದೆ. ಇವರ ಮೂರು ಹೆಣ್ಣುಮಕ್ಕಳಲ್ಲಿ ಒಬ್ಬಾಕೆ ಈಗಾಗಲೇ ವಿಕಲಾಂಗ ಚೇತನೆಯಾಗಿ ಮನೆಯಲ್ಲಿ ಉಳಿದರೆ, ಇನ್ನೊಬ್ಬಾಕೆಯನ್ನು ಸುಳ್ಯ ತಾಲೂಕಿಗೆ ಮದುವೆ ಮಾಡಿಕೊಡಲಾಗಿದೆ. ಇನ್ನೊಬ್ಬಾಕೆಯನ್ನು ಪಿಜಕಳದ ನಿವಾಸಿಯಾಗಿರುವ ಚಂದ್ರಶೇಖರ ನಾಯ್ಕ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಿಕ್ಕು ದೆಸೆಯಿಲ್ಲದ ಕುಟುಂಬಕ್ಕೆ ಈಗ ಚಂದ್ರಶೇಖರ ನಾಯ್ಕ ಮನೆ ಅಳಿಯನಾಗಿ ಆಸರೆಯಾಗಿ ಉಳಿದುಕೊಂಡಿದ್ದಾರೆ. ವಿಚಿತ್ರ ಖಾಯಿಲೆಯಿಂದ ಬಳುತ್ತಿರುವ ಈ ಬಾಲಕ ಆರೈಕೆಯಲ್ಲೇ ತೊಡಗಿಸಿಕೊಂಡಿರುವ ಚಂದ್ರಶೇಖರ ದಂಪತಿ ಕೂಲಿ ಕೆಲಸಕ್ಕೂ ಹೋಗಲಾರದೆ ಪರಿತಪಿಸುತ್ತಿದ್ದಾರೆ.
ಚಂದ್ರಶೇಖರ ನಾಯ್ಕ ಈ ಹಿಂದೆ ಕೇರಳದ ಕ್ಯಾಲಿಕಟ್ ನಲ್ಲಿ ಕಲ್ಲುಕೋರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು. ಆನಂದ ನಾಯ್ಕ ಅವರ ಹತ್ತಿರದ ಸಂಬಂಧಿಯೂ ಆಗಿರುವ ಚಂದ್ರಶೇಖರ ಮದುವೆಯಾಗಿ ಪತ್ನಿಯೊಂದಿಗೆ ಕ್ಯಾಲಿಕಟ್ ನಲ್ಲಿ ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಮದುವೆಯಾಗಿ ಎಂಟು ವರ್ಷ ತನಕ ಮಕ್ಕಳಾಗಿರಲಿಲ್ಲ. ನಾನಾ ಚಿಕಿತ್ಸೆ, ಕಂಡ ಕಂಡ ದೈವದೇವರುಗಳಿಗೆ ಹರಕೆ ಮುಂತಾದವುಗಳ ಫಲವಾಗಿ ಬಳಿಕ ಗಂಡು ಮಗುವಾಯಿತು. ಮಗು ತೇಜಸ್ ಮೂರು ವರ್ಷ ತುಂಬುತ್ತಿದ್ದಾಗಲೇ ಕ್ಯಾಲಿಕಟ್ ನ ಅಂಗನವಾಡಿಯೊಂದಕ್ಕೆ ದಾಖಲಿಸಲಾಗಿತ್ತು. ಮಗು ಖಷಿಯಿಂದಲೇ ಅಂಗನವಾಡಿಗೆ ಹೋಗಿ ಬರುತ್ತಿತ್ತು. ಒಂದು ದಿನ ಮಗು ಇದ್ದಕ್ಕಿದ್ದಂತೆ ಕುಸಿದು ಬಿತ್ತು. ಹಾಗೆ ಕುಸಿದು ಬಿದ್ದ ಮಗು ಎರಡುವರೆ ವರ್ಷ ಕಳೆದರೂ ಮೇಲೆ ಏಳಲೇ ಇಲ್ಲ. ಕೈಕಾಲು, ಸೊಂಟ, ಕತ್ತು ತನ್ನ ಸ್ವಾಧೀನ ಕಳೆದುಕೊಂಡವು, ಇದ್ದುದರಲ್ಲಿ ಎಡದ ಕೈಯೊಂದು ಸ್ವಲ್ಪಮಟ್ಟಿಗೆ ಚಲನಶೀಲತೆಯಲ್ಲಿದೆ. ಹರಳು ಹುರಿದಂತೆ ಮಾತನಾಡುತ್ತಿದ್ದ ಬಾಲಕನ ಮಾತುಗಳು ತೊದಲು ತೊದಲಾಗಿವೆ. ಹಸಿವೆಯಾದಾಗ ಊಟ ಕೊಟ್ಟರೆ ಮಾಡುತ್ತಾನೆ, ಮಲ ಮೂತ್ರ ಆತನ ಅರಿವಿಲ್ಲದೇ ಹೋಗುತ್ತದೆ. ವಿಶೇಷವೆಂದರೆ ನೆನಪಿನ ಶಕ್ತಿ ಮಾತ್ರ ಚೆನ್ನಾಗಿದೆ.
ಈ ಕುಟುಂಬವೇನು ಸುಮ್ಮನೆ ಕೂರಲಿಲ್ಲ. ಕಡಬದಿಂದ ಬೆಂಗಳೂರಿನ ತನಕ ಕಂಡ ಕಂಡ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆಯುರ್ವೇದ ಚಿಕಿತ್ಸೆಯನ್ನೂ ನೀಡಿದ್ದಾರೆ. ಇನ್ನು ಹರಕೆ ಹೇಳಿರುವುದು ತೀರಿಸಲಾಗದಷ್ಟು ಇದೆ. ಇದ್ಯಾವುದೂ ಈ ವರೆಗೆ ಫಲ ನೀಡಿಲ್ಲ. ಮಗುವನ್ನು ನೆಟ್ಟಗೆ ಎದ್ದು ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ವೈದ್ಯರ ಪ್ರಕಾರ ಈ ಮಗುವಿಗೆ ಬ್ರೈನ್ ಸಂಬಂಧಪಟ್ಟ ವೈಟ್ ಮೆಟೆರಿಯನ್ ಎಂಬ ಖಾಯಿಲೆ ಇದೆ. ಇದಕ್ಕೆ ದಿನವಹಿ ಫಿಝಿಯೋತೆರಫಿ ಮಾಡಿಸಬೇಕು ಇನ್ನುಳಿದಂತೆ ಯಾವುದೇ ಚಿಕಿತ್ಸೆ ಫಲ ನೀಡುವುದಿಲ್ಲ. ಪ್ರತೀ ತಿಂಗಳಿಗೆ ಮೂರುವರೆ ಸಾವಿರ ರೂ ಖರ್ಚು ಮಾಡಬೇಕು. ಆದರೆ ಈಗಾಗಲೇ ಲಕ್ಷಾಂತರ ರೂ ಸಾಲಸೋಲ ಮಾಡಿ ಖರ್ಚು ಮಾಡಿರುವ ಈ ಬಡ ಕುಟುಂಬ ಹೈರಾಣಾಗಿದೆ. ಕೂಲಿ ಕೆಲಸಕ್ಕೂ ಹೋಗಲಾರದೆ ಕಂಗೆಟ್ಟಿರುವ ಈ ಕುಟುಂಬ ಈಗ ದಯನೀಯವಾಗಿ ಸೋತು ಹೋಗಿದೆ. ಸುಮಾರು 26,000 ಪಾವತಿಸಿ ರಕ್ತ ಪರೀಕ್ಷೆಗಾಗಿ ವಿದೇಶಕ್ಕೆ ಆರು ತಿಂಗಳ ಹಿಂದೆಯೇ ಕಳುಹಿಸಿದರೂ ಈವರಗೆ ಯಾವುದೇ ವರದಿ ಬಂದಿಲ್ಲ. ಇರುವ ಏಕೈಕ ಪುತ್ರನ ಅವಸ್ಥೆಯನ್ನು ಕಂಡು ಮರುಗುತ್ತಿರುವ ಈ ಕುಟುಂಬ ಎಲ್ಲಾ ಚೈತನ್ಯವನ್ನು ಕಳೆದುಕೊಂಡಿದೆ.
ಮೊದಲೇ ಹೇಳಿದ ಹಾಗೆ ಇವರದ್ದು ಬಿಪಿಎಲ್ ಪಡಿತರ ಚೀಟಿ ಇರುವ ಬಡ ಕುಟುಂಬ, ಆದರೆ ಈವರೆಗೆ ಮಗುವಿನ ಹೆಸರಿಗೆ ಸರಕಾರದಿಂದ ಯಾವುದೇ ಪರಿಹಾರವಾಗಲೀ ಧನ ಸಹಾಯವಾಗಲೀ ಸಿಕ್ಕಿಲ್ಲ. ಎರಡು ವರ್ಷದ ಹಿಂದೆ ಕಡಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅವರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಎಲ್ಲಾ ದಾಖಲೆಗಳೊಂದಿಗೆ ಮುಖ್ಯ ಮಂತ್ರಿಗಳ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಇತ್ತೀಚೆಗೆ ಒಂದು ನೋಟೀಸ್ ಬಂದಿದೆ. ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂದು ಅದರಲ್ಲಿ ತಿಳಿಸಲಾಗಿದೆ. ಈಗಾಗಲೇ ಎಲ್ಲಾ ಮೂಲ ದಾಖಲೆಗಳನ್ನು ನೀಡಿರುವ ಚಂದ್ರಶೇಖರ ನಾಯ್ಕ ನಾನು ಇನ್ನು ಎಲ್ಲಿಂದ ದಾಖಲೆ ನೀಡಬೇಕು ಎನ್ನುತ್ತಾರೆ. ಅಂಗವಿಲ ಮಾಸಾಶನಕ್ಕೆ ಅರ್ಜಿ ಹಾಕಿ ಅದು ಮಂಜೂರಾಗಿ ಆರು ತಿಂಗಳಾದರೂ ಮಗುವಿನ ಖಾತೆಗೆ ಈವರೆಗೆ ನಯಾಪೈಸೆ ಜಮೆಯಾಗಿಲ್ಲ ಎನ್ನುವುದು ದುರಂತವೇ ಸರಿ.