(ನ್ಯೂಸ್ ಕಡಬ) newskadaba.com ಸಿರಿಯಾ, ಮಾ.01. ಐಸಿಸ್ ಉಗ್ರರ ತಾಣದ ಮೇಲೆ ರಷ್ಯಾ ಮತ್ತು ಸಿರಿಯಾ ಸೇನೆಯು ನಡೆಸಿದ ದಾಳಿಯಲ್ಲಿ ಅದೆಷ್ಟೋ ಜನರ ಮಾರಣ ಹೋಮವಾಗಿದ್ದು, ವಿಶ್ವದ ಹಲವು ದೇಶಗಳು ಮೌನ ವಹಿಸಿವೆ.
ರಷ್ಯಾ ಮತ್ತು ಸಿರಿಯಾ ಸೇನೆಯ ವೈಮಾನಿಕ ಬಾಂಬ್ ದಾಳಿಗೆ ಮಕ್ಕಳ ಆಸ್ಪತ್ರೆಯೂ ನಾಶವಾಗಿದ್ದು, ಹಲವು ಮುಗ್ಧ ಮಕ್ಕಳು ಕ್ಷಣಮಾತ್ರದಲ್ಲಿ ಬೆಂದು ಹೋಗಿದ್ದಾರೆ. ಉಗ್ರರ ಅಡಗುದಾಣದಲ್ಲಿದ್ದ ಮಕ್ಕಳ ಆಸ್ಪತ್ರೆಯಿದೆ ಎಂದು ಗೊತ್ತಿದ್ದರೂ ಮುಂಜಾಗ್ರತೆ ವಹಿಸದ ಸಿರಿಯಾ ಸೇನೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಟ್ಟಿಟ್ಟಿಗರು, ಮಾನವೀಯತೆ ಎಲ್ಲಿದೆ…? ನ್ಯಾಯ ಎಲ್ಲಿದೆ…? ಅತಿ ಅಮಾನುಷ ಶಕ್ತಿ ಎಲ್ಲಿದೆ…? ಸಿರಿಯಾದಲ್ಲಿ ಈ ಪರಿ ಮಾರಣಹೋಮ ನಡೆಯುತ್ತಿದ್ದರೂ ವಿಶ್ವ ಏಕೆ ಮೌನವಾಗಿದೆ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ‘ಯಾವ ಮತ, ಯಾವ ದೇಶ, ಯಾವ ಸರ್ಕಾರ ಎಂಬುದು ನನಗೆ ಬೇಕಿಲ್ಲ. ನನಗೆ ಮಾನವೀಯತೆ ಬೇಕು. ಈ ಮುಗ್ಧ ಮಕ್ಕಳ ನಿಷ್ಕಾರಣ ಸಾವು ನಿಲ್ಲಬೇಕು. ಎಂದು ಟ್ವಿಟ್ಟಿಗರೊಬ್ಬರು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ಹುಡುಗನೊಬ್ಬ ತನ್ನ ಚಿಕ್ಕ ತಂಗಿಯನ್ನು ಬಾಂಬ್ ದಾಳಿಯಿಂದ ರಕ್ಷಿಸುವಂತೆ ತಬ್ಬಿ ಕುಳಿತ ದೃಶ್ಯವೊಂದು ಉಗ್ರರ ನಡುವೆಯೂ ಮಾನವೀಯತೆಯ ಸಂದೇಶವನ್ನು ನೀಡುವಂತಿದೆ.