(ನ್ಯೂಸ್ ಕಡಬ) newskadaba.com ಉಡುಪಿ, ಸೆ. 07. ಆಳಸಮುದ್ರ ಮೀನುಗಾರಿಕೆಯ ಬೋಟೊಂದು ಮಲ್ಪೆ ಬಂದರಿನಿಂದ ಹೊರಟು ತೆಂಗಿನಗುಂಡಿ ಬಂದರಿನ ಬಳಿ ಬಂಡೆಗೆ ಬಡಿದು ಸಮುದ್ರದಲ್ಲಿ ಮುಳುಗಿದ ಘಟನೆ ಭಟ್ಕಳ ಸಮೀಪ ನಡೆದಿದೆ.
ಕೊಡವೂರಿನ ಸವಿತಾ ಎಸ್ ಸಾಲಿಯಾನ್ ಒಡೆತನದ ಶ್ರೀ ಕುಲಮಹಾಸ್ತ್ರೀ ಫಿಶರೀಸ್ ಎಂಬ ಬೋಟ್, ಸೆಪ್ಟೆಂಬರ್ 5 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ಮಲ್ಪೆ ಬಂದರಿನಿಂದ ಹೊರಟು, ಬೈಂದೂರಿನಿಂದ ಸುಮಾರು 13 ನಾಟಿಕಲ್ ಮೈಲಿ ದೂರದಲ್ಲಿ, ಒಂದು ಟ್ರಾಲ್ ಮುಗಿಸಿ ಸೆಕೆಂಡ್ ಟ್ರಾಲ್ ಆರಂಭಿಸಿದ ನಂತರ ಬಲೆ ಆಕಸ್ಮಿಕವಾಗಿ ದೋಣಿಯ ಪ್ರೊಪೆಲ್ಲರ್‌ಗೆ ಸಿಕ್ಕಿಹಾಕಿಕೊಂಡಿದ್ದರಿಂದ ಎಂಜಿನ್ ನಿಂತಿತು. ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಸಾಯಿ ಸಾಗರ್ ಎಂಬ ಬೋಟ್ ಬಲೆ ಬಿಡಿಸಲು ಯತ್ನಿಸಿದರಾದರೂ ವಿಫಲವಾಯಿತು. ನಂತರ ಹಗ್ಗ ಬಳಸಿ ದೋಣಿಯನ್ನು ತೆಂಗಿನಗುಂಡಿ ಬಂದರಿನ ಕಡೆಗೆ ಎಳೆಯಲಾಯಿತಾದರೂ, ಹಗ್ಗ ತುಂಡಾದ ಪರಿಣಾಮ ಬೋಟ್ ಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಮುಳುಗಿದೆ ಎನ್ನಲಾಗಿದೆ. ಘಟನೆಯಿಂದ ಸುಮಾರು 60 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ.