ವಿಶೇಷ ಲೇಖನ- “ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ” ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newsksdaba.com ಮಂಗಳೂರು, ಸೆ. 05.

                                   ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ|

                                   ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನ

                                    ಸೊಲ್ಲಲ್ಲೇ ದೈವ ಸರ್ವಜ್ಞ ||

ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿಗಳು ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆತಂದು ಹೊಗಳಿ ಹೊನ್ನ ಶೂಲಕ್ಕೆ ಏರಿಸಿ ಸನ್ಮಾನ ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ ಹಾಕಿ ಪಾಠ ಮಾಡುವಂತೆ ಮಾಡುವುದು. ಶಿಕ್ಷಕರಿಗೆ ಶಾಲೆಯಲ್ಲಿ ಪಾಠಮಾಡುವುದೊಂದು ಬಿಟ್ಟು ಉಳಿದೆಲ್ಲಾ ಜವಾಬ್ದಾರಿ ಹಂಚಿ ಕೈ ತೊಳೆದುಕೊಳ್ಳುವುದು. ಜನಗಣತಿಯಿಂದ ಹಿಡಿದು ಚುನಾವಣಾ ಕರ್ತವ್ಯದವರೆಗೆ ಯಾವುದೇ ಸರಕಾರಿ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು. ಯಾಕೆಂದರೆ ಅತೀ ಸುಲಭವಾಗಿ ಎಲ್ಲದಕ್ಕೂ ಸಿಗುವ ವ್ಯಕ್ತಿಗಳೆಂದರೆ ಅವರೇ ನಮ್ಮ ಶಿಕ್ಷಕರು. ತುಟಿಕ್ ಪಿಟಿಕ್ ಎನ್ನದೇ ಮರು ಮಾತಾಡದೇ ಎಲ್ಲವನ್ನು ಮಾಡಿ ಎಲ್ಲರನ್ನೂ ತೃಪ್ತಿಪಡಿಸುವ ಶಿಕ್ಷಕರು ಇರುವುದು ನಮ್ಮ ದೇಶದಲ್ಲಿ ಮಾತ್ರ. ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ವ್ಯಾಪರೀಕರಣವಾಗಿದೆ. ಶಿಕ್ಷಣ ಬಹುದೊಡ್ಡ ಲಾಭದಾಯಕ ಉದ್ಯಮವಾಗಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಲೆಕ್ಕಕ್ಕಿಂತ ಜಾಸ್ತಿ ಇದ್ದಾರೆ. ಯಾಕೆಂದರೆ ಹೆಚ್ಚಿನ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶಾಲೆಗಳನ್ನು ರ್ಯಾಂಕ್ ವಿದ್ಯಾರ್ಥಿಗಳನ್ನು ಸೃಷ್ಟಿಸಿ ವೈದ್ಯರು, ಇಂಜಿನಿಯರ್ ಮತ್ತು ವಕೀಲರನ್ನು ಸೃಷ್ಟಿಸುವ ಕಾರ್ಖಾನೆಗಳನ್ನಾಗಿ ಮಾಡಿದ್ದಾರೆ. ಶಿಕ್ಷಣದ ಪಾವಿತ್ರತೆ ಮಣ್ಣು ಪಾಲಾಗಿದೆ. ಶಿಕ್ಷಕರ ಮೇಲಿನ ಭಯ ಭಕ್ತಿ ಗೌರವ ಎಲ್ಲಿಯೂ ಕಾಣದಂತೆ ಮಾಯವಾಗಿದೆ. ಸಂಜೆಯಾಗುತ್ತಿದ್ದಂತೆ ಗುರು ಶಿಷ್ಯರಿಬ್ಬರೂ ಬಾರಿನಲ್ಲಿ ಒಟ್ಟಿಗೆ ಬಿಯರ್ ಕುಡಿಯುವಷ್ಟು ಸಲುಗೆ ಹೊಂದಿರುವ ಸಂದಿಗ್ದ ಕಾಲಘಟ್ಟದಲ್ಲಿ ನಾವಿದ್ದೇವೆ. ಗುರುಕುಲ ಪದ್ಧತಿ, ಗುರು ಶಿಷ್ಯರ ಭಯ ಭಕ್ತಿ ವಿನಯ ಇವೆಲ್ಲವೂ ಚರಿತ್ರೆಯ ಪುಟಗಳಲ್ಲಿ ಮಾತ್ರ ಕಾಣ ಸಿಗುತ್ತದೆ. ಈಗ ಶಾಲೆಗಳು ವ್ಯಾಪಾರ ಮಾಡುವ ಕೇಂದ್ರಗಳಾಗಿವೆ. ಅಂಗಿ, ಚಡ್ಡಿ, ಶೂ, ಸಾಕ್ಸ್‍ ನಿಂದ ಹಿಡಿದು ಪೆನ್ನು, ಪೆನ್ಸಿಲ್, ಕರ್ಚಿಫ್ ಕೂಡಾ ಶಾಲೆಯ ಮೊಹರು ಇರುವ ವಸ್ತುಗಳನ್ನು ಬಳಸಿರಬೇಕು ಎಂಬ ಕಟ್ಟಾಜ್ಞೆ ಶಾಲಾ ಆಡಳಿತ ಮಂಡಳಿಯಿಂದ ಶಿಕ್ಷಕರ ಮುಖಾಂತರ ಮಕ್ಕಳಿಗೆ ರವಾನೆಯಾಗಿದೆ. ಇದನ್ನು ಪಾಲಿಸುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ. ಇಲ್ಲವಾದರೆ ಶಿಕ್ಷಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಇದು ಇಂದಿನ ಆಧುನೀಕರಣಗೊಂಡ ಶಿಕ್ಷಣದ ದುರವಸ್ಥೆ. ಮತ್ತು ಶಿಕ್ಷಣದ ವ್ಯಾಪಾರೀಕರಣಗೊಂಡ ವಿಭಿನ್ನ ಮುಖವಾಡಗಳು ಎಂದರೂ ತಪ್ಪಾಗಲಾರದು. ಈ ಎಲ್ಲಾ ಹಿನ್ನೆಲೆಯಲ್ಲಿ ಚಿಂತಿಸಿ ಮಂಥಿಸಿದಾಗ ಶಿಕ್ಷಕರ ದಿನಾಚರಣೆ ಯಾವ ಪುರುಷಾರ್ಥಕ್ಕಾಗಿ ಮಾಡಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಇವತ್ತಿನ ರ್ಯಾಂಕ್ ಆದಾರಿತ ವಿಜೃಂಭಿತ ವ್ಯವಸ್ಥೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿ ಮತ್ತು ರ್ಯಾಂಕ್ ಪಡೆಯುವ ಶಾಲೆಗಳಿಗೆ ರಾಜ ಮರ್ಯದೆ. ಉಳಿದ ಶಾಲೆಗಳ ಅಸ್ಥಿತ್ವವನ್ನೇ ಪ್ರಶ್ನಿಸುವ ಕಾಲಘಟ್ಟ ಇದಾಗಿದೆ. ಒಂದು ಶಾಲೆಯಿಂದ ಎಷ್ಟು ಮಂದಿ ಮಕ್ಕಳು ಸತ್ಪ್ರಜೆಯಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳುತ್ತಾರೆ ಎಂಬ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಒಬ್ಬ ಹೆತ್ತವರು ಅಥವಾ ಅಧಿಕಾರಿಯೂ ನಮ್ಮಲ್ಲಿಲ್ಲ. ಮೌಲ್ಯಾಧಾರಿತ  ನೈತಿಕ ಶಿಕ್ಷಣ ಮತ್ತು ಜೀವನ ಶಿಕ್ಷಣಕ್ಕೆ ಒತ್ತು ನೀಡುವ ಶಿಕ್ಷಕರು ಇಂದು ದುರ್ಬೀನು ಹಾಕಿ ಹುಡುಕಿದರೂ ಸಿಗಲಾರದು. ಇಂದಿನ ಕಾಲಘಟ್ಟದಲ್ಲಿ ಶಿಕ್ಷಕನಿಗೆ ದಂಡಿಸುವ, ಬೈಯುವ ಮತ್ತು ತಿದ್ದುವ ಅಧಿಕಾರ ಇಲ್ಲ. ಆತ ಬರೀ ಸುಗಮಕಾರ (Felicitator)  ಆಗಿ ಬದಲಾಗಿದ್ದಾನೆ. ಶಿಕ್ಷಕ ಒಂದು ರೀತಿಯಲ್ಲಿ ಹಲ್ಲು ಕಿತ್ತ ಹಾವಿನಂತಾಗಿದ್ದಾನೆ. ಈಗಿನ ಕಾಲದ ವಿದ್ಯಾರ್ಥಿಗಳು ಬಹಳ ಬುದ್ಧಿವಂತರು ಮತ್ತು ಸಕಲಕಲಾವಲ್ಲಭರು. ಅವರಿಗೆ ಶಿಕ್ಷಕರ ಅಗತ್ಯವೇ ಇಲ್ಲ. ಮಕ್ಕಳಿಗೆ ಓದಲು, ಬರೆಯಲು ಪೂರಕವಾದ ವಾತಾವರಣ ಸೃಷ್ಟಿಸಿ ಮೇಸ್ತ್ರಿಯ ಕೆಲಸವನ್ನು ಇಂದು ಶಿಕ್ಷಕ ಮಾಡಬೇಕಾಗಿದೆ. ಪುರಂದರದಾಸರು ಹೇಳಿದ ಉಕ್ತಿ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಇಂದು “ಗುರುವೇ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ” ಎಂದು ಬದಲಾಗಿದೆ. ಅಂದು ಕುವೆಂಪು ಹೇಳಿದ “ಹಿಂದೆ ಗುರು ಮುಂದೆ ಗುರಿ ಇರಲಿ” ಈ ಮಾತನ್ನು ಮೀರಿ ನಾವಿಂದು ಬಹುದೂರ ಸಾಗಿದ್ದೇವೆ. ಹಿಂದೆ ಉಳಿದ ಗುರು ಇಂದು ಗುರಿ ತಪ್ಪಿದ್ದಾನೆ. ಹಿಂದೆ ಗುರುವೂ ಇಲ್ಲ ಅದರ ಅಗತ್ಯವೂ ಇಲ್ಲ ಎಂಬ ವಾತಾವರಣ ಸೃಷ್ಟಿಸಿದ್ದೇವೆ. ಮುಂದೆ ಗುರಿ ಅಂತೂ ಇಲ್ಲವೇ ಇಲ್ಲ. ನಮ್ಮ ಆಧುನಿಕ ಶಿಕ್ಷಣ ಎತ್ತ ಸಾಗುತ್ತಿದೆ ಎಂಬುದರ ಅರಿವು ಶಿಕ್ಷಕರಿಗೂ ಇಲ್ಲ, ಹೆತ್ತವರಿಗೂ ಇಲ್ಲ ಮತ್ತು ವಿದ್ಯಾರ್ಥಿಗಳಿಗಂತೂ ಮೊದಲೇ ಇಲ್ಲ.

Also Read  ಡಾ.ಪುನೀತ್ ರಾಜ್‌ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಏನು ಮಾಡಬೇಕು?

  1. ಶಿಕ್ಷಕರಿಗೆ ಸಂಪೂರ್ಣ ಅಧಿಕಾರ ಮತ್ತು ಸ್ವಾತಂತ್ರ ನೀಡುಬೇಕು. ಶಿಕ್ಷಕರಿಗೆ ಶಿಕ್ಷಿಸುವ ಅಧಿಕಾರ ಕೊಡಬೇಕು. ಒಬ್ಬ ಹುಡುಗ ಹುಡುಗಿಯನ್ನು ಚುಡಾಯಿಸಿದ ತಕ್ಷಣವೇ ಶಿಕ್ಷಕನಿಗೆ ಶಿಕ್ಷಿಸುವ ಅಧಿಕಾರ ನೀಡದಿದ್ದಲ್ಲಿ ನಾಳೆ ಅದೇ ಹುಡುಗ ಮುಂದೆ ಯುವಕನಾಗಿ ಸಮಾಜದಲ್ಲಿ ರೇಪ್, ಕೊಲೆ, ಸುಲಿಗೆ ಮಾಡುತ್ತಾನೆ. ಶಿಕ್ಷಕರಿಗೆ ಶಿಕ್ಷಿಸುವ ಅಧಿಕಾರ ಮೊಟಕುಗೊಳಿಸಿ ನಾಳೆ ಆತ ಕೆಟ್ಟ ಪ್ರಜೆಯಾದಾಗ ಶಿಕ್ಷಕನನ್ನು ಹೊಣೆಗಾರ ಮಾಡುವ ದ್ವಂದ್ವ ನಿಲುವಿಗೆ ತಿಲಾಂಜಲಿ ಹಿಡಬೇಕು. 75 ವರ್ಷಗಳ ಹಿಂದಿನಂತೆ ಶಿಕ್ಷಕರ ಬದ್ಧತೆ, ಕಾಳಜಿ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದಾದಲ್ಲಿ ಅದೇ 75 ವರ್ಷಗಳ ಹಿಂದಿನ ಸ್ವಾತಂತ್ರ, ಅಧಿಕಾರ ಮತ್ತು ಗೌರವವನ್ನು ನೀಡಲೇಬೇಕು.
  2. ಶಿಕ್ಷಕರನ್ನು ಶಾಲೆಯ ಮೀಟಿಂಗ್‍ ಗಳಿಗೆ, ಇತರ ಸರಕಾರಿ ಕರ್ತವ್ಯಗಳಾದ ಚುನಾವಣೆ, ಜನಗಣತಿ, ಬಿಸಿಯೂಟ ಹಾಗೂ ಆರೋಗ್ಯ ಜಾಗೃತಿ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಬಾರದು ಅದಕ್ಕಾಗಿ ಬೇರೆಯೇ ಜನರನ್ನು ನೇಮಿಸಬೇಕು. ಶಿಕ್ಷಕರನ್ನು ಆದಷ್ಟು ಮಕ್ಕಳ ಜೊತೆ ಇರುವಂತೆ ಮಾಡಬೇಕು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧವನ್ನು ಮರು ಸ್ಥಾಪಿಸಲೇಬೇಕು. ನೂರೆಂಟು ಜವಾಬ್ದಾರಿಗಳಿಂದ ನಲುಗಿದ ಶಿಕ್ಷಕರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ನಿರೀಕ್ಷಿಸುವ ಸಾಧ್ಯತೆ ಇಲ್ಲದ ಪರಿಸ್ಥಿತಿ ಉಂಟಾಗಿದೆ.
  3. ಪಾಠ ಮತ್ತು ಇನ್ನಿತರ ಮೌಲ್ಯವರ್ಧಿಕ ಶಿಕ್ಷಣಗಳ ಪದ್ಧತಿಯಲ್ಲಿ ಶಿಕ್ಷಕರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಶಿಕ್ಷಕರ ಕೆಲಸದ ನಡುವೆ ಇತರರು ಮೂಗು ತೂರಿಸಬಾರದು. ಹೆತ್ತವರು, ಶಾಲಾ ಆಡಳಿತ ಮಂಡಳಿ ಮತ್ತು ಹೆತ್ತವರು, ಶಿಕ್ಷಕರ ಸಂಘದವರು ಯಾವುದೇ ಹಸ್ತಕ್ಷೇಪ ಮಾಡಲೇಬಾರದು.  ಎಲ್ಲಿ, ಯಾವಾಗ ಏನನ್ನು ಬೋಧಿಸಬೇಕು ಎಂಬುದರ ಸ್ವಾತಂತ್ರವನ್ನು ಶಿಕ್ಷಕರಿಗೆ ವಹಿಸಬೇಕು.
  4. ರಿಸಲ್ಟ್ (ಫಲಿತಾಂಶ) ಅಥವಾ ರ್ಯಾಂಕ್ ಆಧಾರಿತ ಶಿಕ್ಷಣಕ್ಕೆ ತಿಲಾಂಜಲಿ ಇಡಬೇಕು. ಮೌಲ್ಯ ಆಧಾರಿತ ನೈತಿಕ ಶಿಕ್ಷಣ ಮತ್ತು ಜೀವನ ಶಿಕ್ಷಣ, ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದನ್ನು ಬೋಧಿಸುವ ಶಿಕ್ಷಕರನ್ನು ನೇಮಕಮಾಡಬೇಕು. ಶಾಲೆಗಳು ಮತ್ತು ಶಿಕ್ಷಕರು ರ್ಯಾಂಕ್ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಲ್ಲ. ದೇಶದ ಸತ್ಪ್ರಜೆಗಳನ್ನು ಸೃಷ್ಟಿಸುವ ದೇವಾಲಯಗಳಾಗಬೇಕು.
  5. ಶಾಲೆಗಳು ಚಂದ್ರಲೋಕಕ್ಕೆ ಅಥವಾ ಮಂಗಳ ಗ್ರಹಕ್ಕೆ ಹೋಗುವ ಇಂಜಿನಿಯರ್‍ ಗಳನ್ನು ಸೃಷ್ಟಿಸಬೇಕಾಗಿಲ್ಲ. ಜಾತಿ, ಮತ, ಕುಲ, ಗೋತ್ರ ಮತ್ತು ಧರ್ಮದ ಗೋಡೆಗಳನ್ನು ದಾಟಿ ಮಾನವೀಯತೆಯ ಬದುಕನ್ನು ಬದುಕುವ ಸತ್ಪ್ರಜೆಗಳನ್ನು ಸೃಷ್ಟಿಸುವ ದೇವ ಮಂದಿರಗಳಾಗಬೇಕು. ಅದುವೇ ಶಿಕ್ಷಣದ ಬಹುದೊಡ್ಡ ಶಕ್ತಿ ಆಗಬೇಕು.
  6. ಸ್ಮಾರ್ಟ್ ಕ್ಲಾಸ್, ಪವರ್ ಪಾಯಿಂಟ್ ತರಗತಿಗಳು ಎಲ್.ಸಿ.ಡಿ ಪ್ರಾಜೆಕ್ಟರ್‍ ಗಳಿಂದ ಮಾತ್ರ ಸ್ಮಾರ್ಟ್ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಈ ಹಿಂದೆ ಒಂದೇ ಕೊಠಡಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಬರೀ ಬಳಪದ ಕಡ್ಡಿ, ಚಾಕ್ ಪೀಸ್ ಬಳಸಿ ಕರಿ ಹಲಗೆ ಕ್ಲಾಸಿನಿಂದಲೂ ಸ್ಮಾರ್ಟ್ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬಂದಿದ್ದಾರೆ ಎಂಬುದನ್ನು ಗಮನಿಸಬೇಕು. ಒಬ್ಬ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳು, ಆಸಕ್ತಿಗಳು ಮತ್ತು ನಿರಾಸಕ್ತಿಗಳನ್ನು ಗುರುತಿಸುವ ಸ್ಮಾರ್ಟ್ ಶಿಕ್ಷಕರ ಅವಶ್ಯಕತೆ ಇಂದು ಇದೆ. ಸ್ಮಾರ್ಟ್ ಕ್ಲಾಸ್ ಮಾತ್ರ ಇದ್ದರೆ ಸಾಲದು.
  7. ಒಣಗೆಲ್ಲಿನಿಂದ ಚಿಗುರೊಡೆಯಲು ಸಾಧ್ಯವಿಲ್ಲ ಎಂಬ ಕಹಿ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ಶಾಲೆಗೆ ದಾಖಲಾದ ಎಲ್ಲಾ ನೂರು ವಿದ್ಯಾರ್ಥಿಗಳು ಪಾಸಾಗಲೇಬೇಕೆಂದಿಲ್ಲ. ಅದೇ ರೀತಿ ಎಲ್ಲರೂ ವೈದ್ಯರು, ಇಂಜಿನಿಯರ್ ಆಗಬೇಕೆಂಬ ವಾದ ಒಪ್ಪತಕ್ಕದಲ್ಲ. ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಘಣನೆಗೆ ತೆಗೆದುಕೊಂಡು ಶಿಕ್ಷಕರು ಆ ಮಗುವಿನ ಆಸಕ್ತಿಯನ್ನು ಕೆರಳಿಸಿ, ಅರಳಿಸಿ ಆತನ ಅಭಿರುಚಿಯನ್ನು ಪೋಷಿಸಿ, ಬೆಳೆಸಿ, ಪ್ರೋತ್ಸಾಹಿಸಿ ದೇಶದ ಸತ್ಪ್ರಜೆಯನ್ನಾಗಿಸಬೇಕು. ಅಂತಹ ಶಿಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
  8. ಒಬ್ಬ ಉತ್ತಮ ಶಿಕ್ಷಕ ಹೃದಯದಿಂದ ಬೋಧಿಸುತ್ತಾನೆ, ಪುಸ್ತಕದಿಂದಲ್ಲ ಎಂಬ ಮಾತಿನಂತೆ ಶಿಕ್ಷಕರಿಗೆ ಸಂಪೂರ್ಣ ಸ್ವಾತಂತ್ರ ನೀಡಬೇಕು. ಸಿಲೆಬಸ್‍ ನಲ್ಲಿರುವುದನ್ನು ಬೋಧಿಸಬೇಕು, ರ್ಯಾಂಕ್‍ ಗೆ ಸೀಮಿತವಾದ ವಿಚಾರಗಳನ್ನು ಬೋಧಿಸಲಿ ಎಂಬ ಒತ್ತಡ ಶಿಕ್ಷಕರಿಗೆ ವಿಧಿಸಬಾರದು. ಶಿಕ್ಷಕ ದುರ್ಬಲನಾದರೆ, ಶಿಕ್ಷಣ ಸೊರಗುತ್ತದೆ. ಶಿಕ್ಷಕ ಪ್ರಬಲನಾದರೆ ಶಿಕ್ಷಣ ಬಲಿಷ್ಟವಾಗುತ್ತದೆ. ಸುಂದರ ಸುಮಧುರ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ.
  9. ಶಾಲಾ ಶಿಕ್ಷಕರಿಗೆ ಸಕಾಲದಲ್ಲಿ ವೇತನ ನೀಡಬೇಕು. ಅವರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಬೇಕು ಆಗ ಮಾತ್ರ ಶಿಕ್ಷಕರಿಂದ ಪೂರ್ಣ ಪ್ರಮಾಣದ ಕಾರ್ಯಕ್ಷಮತೆ ನಿರೀಕ್ಷಿಸಬಹುದು. ಶಾಲಾ ಶಿಕ್ಷಕರನ್ನು ಹೆತ್ತವರು, ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಪೋಷಕ ಸಂಘದ ಕಾಟದಿಂದ ಮುಕ್ತವಾಗಿಸಬೇಕು. ಶಿಕ್ಷಕರಿಗೆ ಬರೀ ಶಿಕ್ಷಣದ ಜವಾಬ್ದಾರಿ ನೀಡಬೇಕು. ಶಿಕ್ಷಕರನ್ನು ಗುಮಾಸ್ತರ ಕೆಲಸ ಮಾಡುವಂತ ಸನ್ನಿವೇಶ ಸೃಷ್ಟಿಸಬಾರದು. ಸರಕಾರಿ ಶಿಕ್ಷಕರಿಗೆ ಕಾಲ ಕಾಲಕ್ಕೆ ಪದೋನ್ನತಿ ನೀಡಬೇಕು ಮತ್ತು ಬದಲಾಗುತ್ತಿರುವ ವ್ಯವಸ್ಥೆಗೆ ಪೂರಕವಾದ ತರಬೇತಿ ಕೂಡಾ ನೀಡಬೇಕು. ಶಿಕ್ಷಕರಿಗೆ ಪದೋನ್ನತಿ ನೀಡುವಾಗ ಸೇವಾ ಹಿರಿತನಕ್ಕೆ ಮನ್ನಣೆ ನೀಡಬೇಕು. ಅದರಲ್ಲಿ ಕಾಲೇಜು ಹಸ್ತಕ್ಷೇಪ ಮಾಡಲೇಬಾರದು. ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಬೇಕು. ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಂದಿಸಲೇ ಬಾರದು.
  10. ಶಿಕ್ಷಕರಿಗೆ ಬರೀ ಕಲಿಸುವುದಷ್ಟೇ ಆಗಿರಲಿ, ಬೇರೆ ಯಾವ ಜವಾಬ್ದಾರಿ ಬೇಡವೇ ಬೇಡ. ಶಿಕ್ಷಕರನ್ನು ಬರೀ ಬೋಧನೆಗೆ ಮಾತ್ರ ಬಳಸುವಂತಾಗಬೇಕು. ಬೋಧಕೇತರ ಚಟುವಟಿಕೆಗಳಾದ ಸಮವಸ್ತ್ರ ನಿತರಣೆ, ಶೂ ಸಾಕ್ಸ್ ವಿತರಣೆ, ಪಠ್ಯ ಪುಸ್ತಕ ವಿತರಣೆ, ಬೈಸಿಕಲ್ ವಿತರಣೆ, ಬಿಸಿ ಊಟ, ಕ್ಷೀರ ಭಾಗ್ಯ, ಮೊಟ್ಟೆ ಭಾಗ್ಯ, ಹೀಗೆ ನೂರಾರು ಭಾಗ್ಯಗಳನ್ನು ಮಕ್ಕಳಿಗೆ ತಲುಪಿಸುವಾಗ ಶಿಕ್ಷಕರು ಹೈರಾಣಾಗಿ, ಕಲಿಸಲು ಸಮಯವೇ ಇರುವುದಿಲ್ಲ. ಆಸಕ್ತಿಯೂ ಉಳಿಯುವುದಿಲ್ಲ. ಇವೆಲ್ಲದರ ನಡುವೆ ಎಲ್ಲದರ ದಾಖಲಾತಿ, ಮಿಗತೆ, ಕೊರತೆಗಳ ಲೆಕ್ಕ ಹಾಕುತ್ತಾ ಕುಳಿತ ಶಿಕ್ಷಕನಿಗೆ, ಪಾಠಮಾಡಲು ಸಮಯ ಹೇಗೆ ಉಳಿದೀತು. ಇದಕ್ಕೆ ಬೇಕಾದ ಜನರನ್ನು, ಗುಮಾಸ್ತರನ್ನು ಸರಕಾರ ನೇಮಿಸಿ ಬೋಧಕರನ್ನು ಬರೀ ಬೋಧಿಸಲು ಮಾತ್ರ ಬಳಸಬೇಕು.
Also Read  ಸಿಬ್ಬಂದಿಯ ಮೇಲಿನ ಕೋಪಕ್ಕೆ ಹುಸಿಬಾಂಬ್ ಕರೆ- ಆರೋಪಿ ಖಾಕಿ ಬಲೆಗೆ

 

ಕೊನೆಮಾತು:

ಮಕ್ಕಳು ದೇವರ ಸಮಾನವಾದ ನಯ ವಂಚನೆ ತಿಳಿಯದ ಮುಗ್ಧ ಮನಸ್ಸಿನವರು. ಮಗುವಿನ ಮನಸ್ಸು ಹಸಿ ಮಣ್ಣಿನಂತೆ, ಅದನ್ನು ತಟ್ಟಿ, ತಿದ್ದಿ ತೀಡಿ ಸುಂದರವಾದ ಕಲಾತ್ಮಕ ವಿಗ್ರಹ ನಿರ್ಮಿಸುವುದು ಶಿಕ್ಷಕರ ಆಧ್ಯತೆ ಆಗಬೇಕು. ಅದಕ್ಕೆ ಪೂರಕವಾದ ವಾತಾವರಣ, ವ್ಯವಸ್ಥೆ ಮತ್ತು ಸನ್ನಿವೇಶಗಳನ್ನು ಸೃಷ್ಟಿಸುವ ಗುರುತರ ಹೊಣೆಗಾರಿಕೆ ಸರಕಾರಕ್ಕೆ, ಹೆತ್ತವರಿಗೆ, ಶಿಕ್ಷಣಾರ್ಥಿಗಳಿಗೆ ಮತ್ತು ಸಮಾಜಕ್ಕೆ ಇದೆ. ಅದನ್ನು ಒದಗಿಸಿದ ಬಳಿಕ ಸಂಪೂರ್ಣ ಸ್ವಾತಂತ್ರ್ಯವನ್ನು ಶಿಕ್ಷಕರಿಗೆ ನೀಡಿದಲ್ಲಿ ಮಾತ್ರ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನವಾಗಿ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕನಸು ಕಂಡ ಸತ್ಪ್ರಜೆಗಳನ್ನು ರೂಪಿಸಲು ಸಾಧ್ಯವಾಗಬಹುದು. ಹಾಗೆ ಮಾಡಿದಲ್ಲಿ ಮಾತ್ರ ನಾವು ಪ್ರತಿ ವರ್ಷ ಸಪ್ಟೆಂಬರ್ 5 ರಂದು ಆಚರಿಸುವ ಶಿಕ್ಷಕರ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬಂದು ಆಚರಣೆಗೆ ಮತ್ತಷ್ಟು ಅರ್ಥಪೂರ್ಣವಾಗಬಹುದು. ಅದುವೇ ನಾವು ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೆ ಅತಿಶಯೋಕ್ತಿಯಾಗದು.

Also Read  ಚಡ್ಡಿಯಲ್ಲಿ ಪದೇ ಪದೇ ಮೂತ್ರ ಮಾಡುತ್ತಿದ್ದ ಬಾಲಕ ➤‌ ಬೆಂಕಿ ಕಡ್ಡಿ ಹೊತ್ತಿಸಿ ಬಾಲಕನ ಖಾಸಗಿ ಅಂಗವನ್ನು ಸುಟ್ಟ ಶಿಕ್ಷಕಿ

 

ಕಿಡಿನುಡಿ:

ಶಿಕ್ಷಣದ ವ್ಯಾಪಾರೀಕರಣದಿಂದ ಶಿಕ್ಷಕರು ಮತ್ತು ಶಿಕ್ಷಣಾರ್ಥಿಗಳ ಮೇಲೆ ವಿಪರೀತ ಒತ್ತಡ ಹೇರಲಾಗುತ್ತಿದೆ. ಹೆತ್ತವರ ದುರಾಸೆ ಮಿತಿ ಮೀರುತ್ತಿದೆ. ಎಷ್ಟಾದರೂ ಖರ್ಚಾಗಲಿ ತನ್ನ ಮಗ/ಮಗಳು ವೈದ್ಯರಾಗಲಿ, ಇಂಜಿನಿಯರ್ ಆಗಲಿ, ಎಂಬ ಪೈಪೋಟಿ ಆರಂಭವಾಗಿ ಶಿಕ್ಷಣದ ವ್ಯವಸ್ಥೆಯನ್ನೇ ಅಲ್ಲಾಡಿಸುತ್ತದೆ. “ ಟ್ಯೂಷನ್‍ಗಳ ರಾಜಧಾನಿ” ಎಂಬ ಹೆಗ್ಗಳಿಕೆ ಪಡೆದ ರಾಜಸ್ಥಾನದ ಕೋಟಾ ಈಗ “ಆತ್ಮಹತ್ಯೆಗಳ ರಾಜಧಾನಿ”ಯಾಗಿ ಬದಲಾಗಿದೆ. ಕಳೆದ ಆರು ತಿಂಗಳಲ್ಲಿ 24 ಮಂದಿ ವಿದ್ಯಾರ್ಥಿಗಳು ಜೀವತೆತ್ತಿದ್ದಾರೆ. ಮಕ್ಕಳ ಆತ್ಮಹತ್ಯೆ ತಡೆಯಲು ಕೊಠಡಿಯಲ್ಲಿನ ಫ್ಯಾನ್‍ ಗಳಿಗೆ ಸ್ಟ್ರಿಂಗ್ ಅಳವಡಿಕೆ, ಬಹುಮಹಡಿ ಕಟ್ಟಡಗಳ ಬಾಲ್ಕನಿಗೆ ಬಲೆ ಅಳವಡಿಕೆ, ಬಾಗಿಲು ಬಡಿ ಅಭಿಯಾನ, (ದರ್ವಾಜ್ ಪೇ ದಸ್ತಕ್) ಮುಂತಾದ ಕುಚೋದ್ಯದ, ಅಸಹಜ, ಅಸಾಂಪ್ರದಾಯಿಕ ಮತ್ತು ನಗೆಪಾಟಲಿಗೆ ಈಡಾಗುವ ಕ್ರಮಗಳಿಗೆ ಮುಂದಾಗಿರುವುದು ನಮ್ಮ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯ ಬಹು ದೊಡ್ಡ ದುರಂತ. ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ ಎಂದು ಆತ್ಮ ವಿಶ್ವಾಸ ತುಂಬಿ, ಛಲವನ್ನು, ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳಿಗೆ  ನೀಡುವುದರ ಬದಲು ಈ ಅಪಹಾಸ್ಯದ ಕ್ರಮಗಳನ್ನು ಕೈಗೊಂಡಿರುವುದು ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ವ್ಯಾಪಾರೀಕರಣಗೊಂಡ ವಿಭಿನ್ನ ಮುಖವನ್ನು ಜಗತ್ತಿಗೆ ತೆರೆದು ಶಿಕ್ಷಣದ ವಾಸ್ತವವನ್ನು ಬೆತ್ತಲು ಮಾಡಿದೆ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಮಕ್ಕಳಿಗೆ ಸಂಕೋಲೆಯಲ್ಲಿ ಬಂಧಿಸಿ ರೂಮಿನಲ್ಲಿ ಕೂಡಿಹಾಕಿ ಓದಿಸುವ ದಿನಗಳು ಬಂದರೆ ಅಭಾಸವೇನಲ್ಲ. ಹಳಿತಪ್ಪಿ ಕುಲಗೆಟ್ಟುಹೋದ ಶಿಕ್ಷಣ ಕ್ಷೇತ್ರವನ್ನು ಸರಿ ದಾರಿಗೆ ತರಲು ತುರ್ತುಕ್ರಮ ಕೈಗೊಳ್ಳಬೇಕು. ಶಿಕ್ಷಣವನ್ನು ಸೊರಗದಂತೆ ನೋಡಿಕೊಂಡು, ಶಿಕ್ಷಕರನ್ನು ದುರ್ಬಲರಾಗಿಸದೇ, ಬಲಿಷ್ಟರನ್ನಾಗಿ ಮಾಡಿ ಸಂಪೂರ್ಣ ಸ್ವಾತಂತ್ರ್ಯ ನೀಡಿದಲ್ಲಿ ವಿದ್ಯಾರ್ಥಿಗಳು ಸತ್ಪ್ರಜೆಗಳಾಗುವ ದಿನಗಳು ಬರಲೂಬಹುದು

ಡಾ| ಮುರಲೀ ಮೋಹನ್ ಚೂಂತಾರು

ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರು

MDS, DNB, MOSRCSEd(U.K), FPFA, M.B.A

ಮೊ : 9845135787

error: Content is protected !!
Scroll to Top