(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲಿ ಹೊಸದೊಂದು ಸ್ಮಾರ್ಟ್ ಯೋಜನೆಯನ್ನು ಜಾರಿಗೆ ತರಲು ಮೆಸ್ಕಾಂ ಇಲಾಖೆ ಸಿದ್ಧವಾಗಿದೆ.
ಮೊಬೈಲ್, ಡಿಟಿಎಚ್ ಸೇವೆಗಳಿಗೆ ರಿಚಾರ್ಜ್ ಮಾಡಿದಂತೆ ಇನ್ಮುಂದೆ ವಿದ್ಯುತ್ ಪಡೆಯಬೇಕಾದಲ್ಲಿ ಮೊದಲೇ ಪ್ರಿಪೈಡ್ ಮಾಡಿ ನಂತರ ವಿದ್ಯುತ್ ಬಳಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಹಕರು ಬಿಲ್ ಕಟ್ಟದೇ ಇರುವಂತಹ ಕಿರಿಕಿರಿಯನ್ನು ತಪ್ಪಿಸಲು ಮೆಸ್ಕಾಂ ಇಲಾಖೆಯು ಹೊಸದೊಂದು ಯೋಜನೆಯನ್ನು ಪರಿಚಯಿಸುತ್ತಿದ್ದು, ಪ್ರಾಯೋಗಿಕವಾಗಿ ಮಂಗಳೂರಿನಲ್ಲಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ನಾವು ರೀಚಾರ್ಜ್ ಮಾಡಿಕೊಂಡ ಮೌಲ್ಯದ ವಿದ್ಯುತ್ತನ್ನು ಬಳಕೆ ಮಾಡಬಹುದಾಗಿದ್ದು, ಹಣ ಮುಗಿಯುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ವಿದ್ಯುತ್ ಕಡಿತಗೊಳ್ಳುತ್ತದೆ. ಕೊನೆಯ 25 ರೂ. ಬ್ಯಾಲೆನ್ಸ್ ಇರುವಾಗ ಮೊಬೈಲಿಗೆ ಮೆಸೇಜ್ ಕಳುಹಿಸಯವ ಮೂಲಕ ಎಚ್ಚರಿಸುತ್ತದೆ.
ಟಿವಿ ಸೆಟ್ ಆಪ್ ಬಾಕ್ಸ್ ನಲ್ಲಿರುವಂತೆ ಸ್ಮಾರ್ಟ್ ಕಾರ್ಡ್ ಹೊಂದಿರುವ ಹೊಸ ಮೀಟರ್ ಗೆ 8 ಸಾವಿರ ರೂ. ಬೆಲೆಯಿದ್ದು, ಆ ಹಣವನ್ನು ಮೆಸ್ಕಾಂ ಭರಿಸಲಿದೆ. ಆದರೆ, ಮೀಟರ್ ನಿರ್ವಹಣಾ ವೆಚ್ಚವನ್ನು ಗ್ರಾಹಕರು ಮೆಸ್ಕಾಂ ಗೆ ಪ್ರತೀ ತಿಂಗಳು ಕಟ್ಟಬೇಕಿದೆ. ಹೊಸ ಯೋಜನೆಯಿಂದ ಪ್ರಾರಂಭದಲ್ಲಿ ಇಲಾಖೆಗೆ ಹೊರೆಯಾದರೂ, ನಂತರದ ದಿನಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಸುಲಭವಾಗಬಹುದು ಎಂಬುವುದು ಮೆಸ್ಕಾಂ ಅಧಿಕಾರಿಯೋರ್ವರ ಅಭಿಮತ. ಅಲ್ಲದೇ ಗ್ರಾಹಕರು ಎಷ್ಟು ಬೇಕೋ ಅಷ್ಟೇ ವಿದ್ಯುತ್ ನ್ನು ಜಾಗರೂಕತೆಯಿಂದ ಬಳಸುವ ಮೂಲಕ ಪವರ್ ಕಟ್ ಸಮಸ್ಯೆಗೂ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ದೊರಕಬಹುದು ಎನ್ನಲಾಗಿದೆ.