ಮಂಗಳೂರು: ತಂಡದಿಂದ ಚೂರಿ ಇರಿತ ► ನಾಲ್ವರಿಗೆ ಗಾಯ, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18. ತಂಡವೊಂದು ನಾಲ್ಕು ಮಂದಿಗೆ ತಲವಾರಿನಿಂದ ಇರಿದಿದ್ದರಿಂದ ಓರ್ವ ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಸಮೀಪದ ಹರ್ಷ ಬಾರ್ ಬಳಿ ಸೋಮವಾರ ರಾತ್ರಿ ನಡೆದಿದೆ.

ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಬಂದರ್‌ ನಿವಾಸಿ ಶಫೀಕ್ (45) ಎಂದು ಗುರುತಿಸಲಾಗಿದ್ದು, ಶಫೀಕ್‌ಗೆ ಮೂವರ ತಂಡವೊಂದು ಹಿಗ್ಗಾಮುಗ್ಗ ಥಳಿಸುವುದನ್ನು ಕಂಡ ಅನೀಸ್ (22), ಹಫೀಝ್ (22) ಹಾಗೂ ಸ್ಥಳೀಯ ಪಾನ್ ಅಂಗಡಿ ವ್ಯಾಪಾರಿಯೊಬ್ಬರು ತಡೆದಾಗ ಆರೋಪಿಗಳು ಕಾರಿನಲ್ಲಿದ್ದ ತಲವಾರಿನಿಂದ ಇರಿದಿದ್ದಾರೆ‌. ಘಟನೆಯಲ್ಲಿ ಶಫೀಕ್‌ರ ತಲೆಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ಮುಂದುವರಿಸಿದ್ದಾರೆ.

Scroll to Top