ಅಡ್ಡೂರು ಪ್ರದೇಶವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿರುವ ಭರತ್ ಶೆಟ್ಟಿಯವರ ನಡೆ ಖಂಡನೀಯ- ಎಸ್ಡಿಪಿಐ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಡ್ಡೂರು ಎಂಬ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಕಾರಣಕ್ಕೆ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಡಾ.ಭರತ್ ಶೆಟ್ಟಿ ಆ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವುದು ಖಂಡನೀಯ.

ಭಾರತದ ಸಾರ್ವಭೌಮತ್ವಕ್ಕೆ ಒಳಪಟ್ಟ ಪ್ರದೇಶ ಅಥವಾ ಜನರನ್ನು ಶತ್ರು ರಾಷ್ಟ್ರಗಳೊಂದಿಗೆ ತುಲನೆ ಮಾಡಿ ನಿಂದಿಸಿ ಹೇಳಿಕೆ ನೀಡಿರುವ ಭರತ್ ಶೆಟ್ಟಿಯವರು ಕೂಡಲೇ ಕ್ಷೇತ್ರದ ಜನರೊಂದಿಗೆ ಕ್ಷಮೆ ಯಾಚಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರುರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕಳೆದ ಒಂದೆರಡು ತಿಂಗಳ ಹಿಂದೆ ಅಕ್ರಮ ಮರಳುಗಾರಿಕೆಯ ದೊಡ್ಡ ಜಾಲದ ರೂವಾರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರನ್ನು ಬಂಧಿಸಿದಾಗ ನಿಮ್ಮ ಪಕ್ಷದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಪೋಲಿಸ್ ಠಾಣೆಗೆ ನುಗ್ಗಿ ರಾದ್ದಾಂತ ಮಾಡಿ ಪೊಲೀಸರನ್ನು ಬೆದರಿಸಿ ಬಿಡುಗಡೆ ಮಾಡಲು ಒತ್ತಾಯಿಸಿದ ಘಟನೆ ಜನರು ಮರೆತಿಲ್ಲ. ಜಿಲ್ಲೆಯಲ್ಲಿ ಪರವಾನಿಗೆ ರಹಿತವಾಗಿ ಎಲ್ಲೆಲ್ಲ ಅಕ್ರಮ ಮರಳುಗಾರಿಕೆ ನಡೆಯುತ್ತಿದೆಯೋ ಅದೆಲ್ಲವನ್ನೂ ತಡೆಯುವ ಇಲಾಖೆಗಳ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ಸರ್ವಾಧಿಕಾರ ಧೋರಣೆ ತಾಳುವ ಬಿಜೆಪಿ ನಾಯಕರ ಗೂಂಡಾ ವರ್ತನೆಯೇ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯಲು ಕಾರಣವಾಗಿದೆ. ಮುಸ್ಲಿಮರು ಅಧಿಕ ಮಂದಿ ಇದ್ದಾರೆ ಎಂಬ ಕಾರಣಕ್ಕೆ ಆ ಪ್ರದೇಶವನ್ನು ನೀವು ಮಿನಿ ಪಾಕಿಸ್ತಾನ ಎಂದು ಕರೆಯುವುದಾದರೆ, ದೇಶದಲ್ಲಿ ಹಲವಾರು ಬಾಂಬ್ ಸ್ಪೋಟ ಮಾಡಿ ರಕ್ತಚರಿತದ ಕರಾಳ ಇತಿಹಾಸ ಹೊಂದಿರುವ ನಿಮ್ಮ ಮಾತೃ ಸಂಘಟನೆಯ ಸದಸ್ಯರು ಅಧಿಕ ಇರುವ ಪ್ರದೇಶವನ್ನು ಮಿನಿ ಭಯೋತ್ಪಾದಕರ ತಾಣ ಎಂದು ಕರೆಯಬಹುದೇ ಎಂಬುವುದನ್ನು ಕೂಡಾ ತಾವು ಸ್ಪಷ್ಟಪಡಿಸಬೇಕು ಎಂದು ಅಶ್ರಫ್ ಅಡ್ಡೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group