(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಸರಕಾರಿ ನೌಕರರಿಗೆ ಗುರುತು ಚೀಟಿಯ ಕೊರಳುದಾರ ಕೆಂಪು – ಹಳದಿ ಬಣ್ಣಕ್ಕೆ ಬದಲಾಯಿಸಲಾಗಿದೆ.
ಈಗಾಗಲೇ ಸರಕಾರ ಅಗಸ್ಟ್ 16ರಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಸರಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿ ಗುರುತಿನ ಚೀಟಿಯನ್ನು ಧರಿಸುವ ಸಂದರ್ಭ ಕೆಂಪು ಹಳದಿ ಬಣ್ಣದ ಕೊರಳುದಾರ (ಟ್ಯಾಗ್) ಧರಿಸುವಂತೆ ಸೂಚಿಸಿದ್ದು, ಅದರಂತೆ ಭೂಮಾಪನ ಇಲಾಖೆಯಲ್ಲಿ ಬುಧವಾರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕನ್ನಡ ನಾಡಿನ ಕಂಪು ಸೂಸುವ ಕೊರಳದಾರವನ್ನು ವಿತರಿಸಲಾಯಿತು. ಇಲಾಖೆಯ ಮೈಸೂರು ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಇ ಪ್ರಕಾಶ್ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಟ್ಯಾಗ್ ವಿತರಿಸಿ, ಶುಭ ಹಾರೈಸಿದರು. ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಭೂಮಾಪನ ಇಲಾಖೆಯ ವತಿಯಿಂದ ಕನ್ನಡದ ಸೊಗಡನ್ನು ಬಿಂಬಿಸುವ ಕೆಂಪು ಹಳದಿ ಬಣ್ಣದ ಕೊರಳುದಾರ ವಿತರಣೆ ಮಾಡಲಾದ ವಿಶೇಷ ಸಂದರ್ಭ ಜಿಲ್ಲೆಯ ಎಲ್ಲಾ ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಭೂಮಾಪನ ಇಲಾಖೆಯ ಸಿಬಂಧಿಗಳು ಉಪಸ್ಥಿತರಿದ್ದರು.