ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ ಪ್ರಕರಣ – ಆರೋಪಿ ಪೊಲೀಸ್ ವಶಕ್ಕೆ..?

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಅಕ್ರಮ ದನ ಸಾಗಾಟದ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಗೆ ಕಾರಣವಾದ ಆರೋಪಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಶನಿವಾರ ರಾತ್ರಿ ವೇಳೆಗೆ ತನ್ನ ಕಾರನ್ನು ಮರ್ಧಾಳದಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಮಾರುತಿ 800 ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ವಿಠಲ ರೈಯವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆರೋಪಿಯು ಕಾರನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿನ ದಿ| ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು‌.

Also Read  ಮಂಗಳೂರು: ಬಸ್ ನ ಫೂಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ವಿದ್ಯಾರ್ಥಿನಿಯರ ಪ್ರಯಾಣ ➤ ವಿಡಿಯೋ ವೈರಲ್

ವಿಷಯ ತಿಳಿದು ಹಿಂದೂ ಪರ ಸಂಘಟನೆಗಳು ತಡರಾತ್ರಿ ವೇಳೆಗೆ ಕಡಬದಲ್ಲಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ, ಎಸ್ಪಿ ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಹಿಂದೂ ಮುಖಂಡ ಅರುಣ್ ಪುತ್ತಿಲ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮೊದಲಾದವರು ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದರು. ರಾತ್ರಿ ವೇಳೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪ್ರತಿಭಟನಾಕಾರರ ಜೊತೆ ಮಾತನಾಡಿ, ಆರೋಪಿಗಳನ್ನು ಬಂಧಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸಲಾಗಿತ್ತು. ಆರೋಪಿಗಳ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು ನೀಡಲಾಗಿತ್ತು. ಈ ನಡುವೆ ಬೆಳಗ್ಗಿನ ಜಾವ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿಯನ್ನು ಇನ್ನಷ್ಟೇ ನೀಡಬೇಕಾಗಿದೆ.

Also Read  ಮಂಗಳೂರು: ಅಕ್ರಮ ಮರಳುಗಾರಿಕೆಯಿಂದ ದ್ವೀಪ ಉಳಿಸಲು ಪ್ರತಿಭಟನೆ

error: Content is protected !!
Scroll to Top