ಸಾಮಾಜಿಕ ಜಾಲತಾಣದಲ್ಲಿ ಪಡೆದ ಜ್ಞಾನದಿಂದ ರಾಷ್ಟ್ರನಿರ್ಮಾಣ ಸಾಧ್ಯವಿಲ್ಲ -ಮಹಾನಗರಪಾಲಿಕೆ ಆಯುಕ್ತ ಆನಂದ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 24. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲು ಸಂವಿಧಾನವನ್ನು ಅರಿತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಿಂದ ಪಡೆದ ಜ್ಞಾನದಿಂದ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಆನಂದ್ ಹೇಳಿದ್ದಾರೆ. ಅವರು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದ ಸಂವಿಧಾನ ಜಾಥಾ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಂವಿಧಾನ ಜಾಗೃತಿ ಜಾಥಾವು ಜಿಲ್ಲೆಯಾದ್ಯಂತ ಸಂಚರಿಸಿ. ಸಂವಿಧಾನ ಮಹತ್ವವನ್ನು ಸಾರಿದೆ. ವಿದ್ಯಾರ್ಥಿಗಳು ಸಂವಿಧಾನವನ್ನು ಅರಿಯಲು ನಿರಂತರ ಅಧ್ಯಯನ ಮಾಡಬೇಕು. ನ್ಯಾಯಾಂಗ, ಕಾರ್ಯಾಂಗದ ಬಗ್ಗೆ ತಿಳಿಯಲು ಅವುಗಳನ್ನು ಅಧ್ಯಯನ ಮಾಡಬೇಕು ಆಗ ನಾವು ಸಮಸ್ಯೆಗಳನ್ನು ಎದುರಿಸಲು ಸಾಧ್ಯ, ಸಂವಿಧಾನವನ್ನು ಧರ್ಮಗ್ರಂಥದ ರೀತಿ ಪೂಜಿಸಿ ಗೌರವಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಂವಿಧಾನವನ್ನು ಅರಿತು ಅರ್ಥೈಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಟೀಲು ಕಾಲೇಜಿನ ಕನ್ನಡ ಉಪನ್ಯಾಸಕ ಪ್ರದೀಪ್ ಸಂವಿಧಾನದ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿ, ಸಂವಿಧಾನವು ಕೇವಲ ಒಂದು ಜನಾಂಗ ಅಥವಾ ಜಾತಿಗೆ ಸೀಮಿತವಲ್ಲ, ಸಂವಿಧಾನವನ್ನು ಅದ್ಯಯನ ಮಾಡಿದಾಗ ಮಾತ್ರ ಸಂವಿಧಾನದ ಉದ್ಧೇಶ, ಸಂವಿಧಾನದ ಮಹತ್ವವನ್ನು ತಿಳಿಯಲು ಸಾದ್ಯ ಎಂದರು. ದಲಿತ ಮುಖಂಡ ದೇವದಾಸ್ ಸಂವಿಧಾನದ ರಚನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಅಂಬೇಡ್ಕರ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು. ಬಲೂನ್ ಹಾರಿಸುವ ಮೂಲಕ ವಿನೂತನವಾಗಿ ಸಮಾರೋಪ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಲಾ ತಂಡಗಳಿಂದ ಸಂವಿಧಾನ ಗೀತೆಗಳು ಹಾಗೂ ಬೀದಿ ನಾಟಕವನ್ನು ಪ್ರಸ್ತುತ ಪಡಿಸುವ ಮೂಲಕ ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ಸ್ವಾಗತಿಸಿದರು. ಸಮಗ್ರ ಗಿರಿಜನ ಯೋಜನಾ ಸಮನ್ವಯ ಅಧಿಕಾರಿ ಶಿವಕುಮಾರ್ ವಂದಿಸಿದರು.

Also Read  ಮಂಗಳೂರು : 7 ದಿನದ ಕಂದಮ್ಮನಿಗೂ ಕೊರೋನಾ ಪಾಸಿಟಿವ್

error: Content is protected !!
Scroll to Top