ಶಾಲಾ ಕಾಲೇಜು ಸಮೀಪದ ಅಂಗಡಿಗಳಲ್ಲಿ ತಂಬಾಕು ಮಾರಾಟ- ನಿರ್ದಾಕ್ಷಿಣ್ಯ ಕ್ರಮಕ್ಕೆ ಮಂಗಳೂರು ಎ.ಸಿ. ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಶಾಲಾ ಕಾಲೇಜುಗಳ ಆವರಣದ 100 ಮೀಟರ್ ಅಂತರದಲ್ಲಿರುವ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ತಂಬಾಕುಗಳನ್ನು ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳುವಂತೆ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಸೂಚಿಸಿದ್ದಾರೆ. ಅವರು ಮಂಗಳವಾರದಂದು ನಗರದ ಮಿನಿ ವಿಧಾನಸೌಧದಲ್ಲಿ ನಡೆದ ತಾಲೂಕು ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಕಾಲೇಜುಗಳ ಆವರಣದಿಂದ  100 ಮೀಟರ್ ಅಂತರದಲ್ಲಿ ತಂಬಾಕು ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರೆ ಅಂತವರ ವಿರುದ್ಧ ಕ್ರಮವನ್ನು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಂಡವನ್ನು ರಚಿಸಿ ಪ್ರತೀ 15 ದಿನಗಳಿಗೊಮ್ಮೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ಫಲಕವನ್ನು ಅಳವಡಿಸಬೇಕು, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿರುವವರ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಪ್ರಾಣಿಗಳ ಮಲದಿಂದ ಮನುಷ್ಯರಿಗೆ ಹರಡುತ್ತಿರುವ ಇಲಿ ಜ್ವರದ ಬಗ್ಗೆ ಮಾತನಾಡಿದ ಅವರು, ಜನರಲ್ಲಿ ಇಲಿ ಜ್ವರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಇಲಿ ಜ್ವರವು ಬಾರದಂತೆ ತಡೆಗಟ್ಟಲು ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಬೇಕು, ಅಸ್ವಚ್ಛತೆಯಿಂದ ಕೂಡಿರುವಂತಹ ಪ್ರದೇಶಗಳಾದ ಚರಂಡಿ, ತ್ಯಾಜ್ಯದ ರಾಶಿಗಳನ್ನು ಶುಚಿಗೊಳಿಸುವಂತೆ ಆದೇಶಿಸಿದರು. ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುತ್ತಿರುವ ದಡಾರ ಮತ್ತು ರುಬೆಲ್ಲ ರೋಗಗಳ ಬಗ್ಗೆ ಮಾತನಾಡಿದ ಅವರು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಬಗ್ಗೆ ಹಾಗೂ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಪಡೆಯುವಂತೆ ಮಾಹಿತಿಯನ್ನು ಒದಗಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ ಸೂಚಿಸಿದರು.

ನೀರಿನ ಟ್ಯಾಂಕ್ ಶುದ್ದಗೊಳಿಸಿ

ಇತ್ತೀಚೆಗೆ ನಗರದ ಕೆಲವು ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‍ಗಳಲ್ಲಿ ಅಶುದ್ಧ ನೀರಿನ ಸೇವನೆಯಿಂದಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಪ್ರಕರಣಗಳು ನಡೆದಿದೆ. ಹಾಸ್ಟೆಲ್ ಪಿಜಿಗಳಲ್ಲಿ ನೀರಿನ ಟ್ಯಾಂಕರ್‍ ಗಳನ್ನು ಸ್ವಚ್ಛಗೊಳಿಸುವಂತೆ ಆದೇಶಿಸಬೇಕು. ಟ್ಯಾಂಕರ್ ಗಳಿಂದ ಸರಬರಾಜಾಗುವ ನೀರು ಯಾವ ಭಾಗದಿಂದ ತರಲಾಗುತ್ತಿದೆ ಮತ್ತು  ಅದು ಸ್ವಚ್ಛವಾಗಿದೆಯೇ ಬಳಕೆಗೆ ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಪರೀಕ್ಷಿಸಬೇಕು ಎಂದು ಉಪವಿಭಾಗಾಧಿಕಾರಿ ಹರ್ಷವರ್ಧನ್ ಸೂಚಿಸಿದರು.

ಬಡವರ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಬಗ್ಗೆ ಅವರು ಮಾತನಾಡಿ ಹುಟ್ಟಿನಿಂದ ಮಕ್ಕಳಲ್ಲಿ ಉಂಟಾಗುವ ಆರಂಭಿಕ ನ್ಯೂನ್ಯತೆಗಳು, ದೋಷಗಳು, ರೋಗಗಳ ಬಗ್ಗೆ, ಪೌಷ್ಟಿಕ ಆಹಾರದ ಕೊರತೆಯ ಬಗ್ಗೆ ಹೆಚ್ಚಾಗಿ ಬಡತನದಲ್ಲಿರುವ ಮಕ್ಕಳಲ್ಲಿ ತಪಾಸಣೆಯನ್ನು ನಡೆಸಿ ಅವರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು. ಸೇವೆಯನ್ನು ಸಂಖ್ಯೆ ಆಧಾರಕ್ಕಿಂತ ಗುಣಮಟ್ಟದ ಸೇವೆಯನ್ನು ನೀಡಬೇಕು ಎಂದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಕುಮಾರ್ ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ವಯಸ್ಕರಿಗೆ 2025ರ ಒಳಗೆ ಬಿಸಿಜಿ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕು ಎಂಬ ಸರ್ಕಾರದ ಹೊಸ ಪ್ರಸ್ತಾಪವನ್ನು ತಿಳಿಸಿದರು. ಹೆಚ್ಚಾಗಿ ಈ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರು, ಮದ್ಯ ವ್ಯಸನಿಗಳು, ಟಿಬಿ ರೋಗಿಗಳ ಸಂಪರ್ಕದಲ್ಲಿ ಇರುವವರು, ಎಚ್‍ಐವಿ, ರೋಗಿಗಳು, ಮಧುಮೇಹದಿಂದ ಬಳಲುತ್ತಿರುವವರು, 4 ವರ್ಷಗಳ ಹಿಂದೆ ಟಿಬಿ ಕಾಯಿಲೆಯಿಂದ ಗುಣಮುಖರಾಗಿರುವವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಬಿಸಿಜಿ ಲಸಿಕೆಯನ್ನು ಪಡೆಯಬಹುದು ಎಂದು ತಿಳಿಸಿದರು. ವರ್ಷದಲ್ಲಿ ಎರಡು ಸಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಂತುಹುಳ ಮಾತ್ರೆ ನೀಡಲಾಗುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಅಥವಾ ವಯಸ್ಕರು ಕೂಡ ಈ ಜಂತುಹುಳ ಮಾತ್ರೆಯನ್ನು ತೆಗೆದುಕೊಳ್ಳಬಹುದು ಎಂದು ಸೂಚಿಸಿದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಕುಂದು ಕೊರತೆಯ ಬಗ್ಗೆ ಮಾತನಾಡಿ ಪಿಎಫ್ ಮತ್ತು ಇಎಸ್‍ಐ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group