(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.13. ಇತ್ತೀಚೆಗೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಸುರತ್ಕಲ್ ನ ದೀಪಕ್ ರಾವ್ ಕುಟುಂಬದ ಜೀವನಕ್ಕೆ ಕೇಂದ್ರ ಸರ್ಕಾರ ಆಧಾರವಾಗಿ ನಿಲ್ಲಲು ಮುಂದಾಗಿದ್ದು, ದೀಪಕ್ ಸೋದರ ಸತೀಶ್ ಗೆ ಕೇಂದ್ರ ಸರಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಆಫರ್ ಬಂದಿದೆ.
ಹುಟ್ಟಿನಿಂದಲೇ ಮಾತೂ ಬರದ, ಕಿವಿಯೂ ಕೇಳದ 28 ರ ಹರೆಯದ ಅನಕ್ಷರಸ್ಥ ಸತೀಶ್ ನಿಗೆ ಪಣಂಬೂರಿನಲ್ಲಿರುವ ಕೆಐಒಸಿಎಲ್ ಕಂಪನಿಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ನೀಡಲು ಆಫರ್ ನೀಡಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಇತ್ತೀಚೆಗೆ ದೀಪಕ್ ಮನೆಗೆ ಭೇಟಿ ನೀಡಿದ್ದ ವೇಳೆ ಸಹೋದರ ಸತೀಶ್ ಗೆ ಮಾನವೀಯ ನೆಲೆಯಲ್ಲಿ ಉದ್ಯೋಗದ ಭರವಸೆ ನೀಡಿದ್ದರು. ಅಂದೇ ಕೆಐಒಸಿಎಲ್ ಗೆ ತೆರಳಿದ್ದ ಹೆಗಡೆ, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದರು. ಬಳಿಕ ಸತೀಶ್ ಅವರಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಂಡ ಕೆಐಒಸಿಎಲ್ ಅಧಿಕಾರಿಗಳು, ಸತೀಶ್ ಗೆ ಕಂಪನಿಯಲ್ಲಿ ಕಾಯಂ ಉದ್ಯೋಗಕ್ಕೆ ಸಮ್ಮತಿ ಸೂಚಿಸಿದ್ದರು. ವಾರದೊಳಗೆ ಉದ್ಯೋಗ ನೇಮಕಾತಿ ಪತ್ರ ಸತೀಶ್ ಅವರ ಕೈಸೇರುವ ನಿರೀಕ್ಷೆಯಿದ್ದು, ಅಟೆಂಡರ್ ಅಥವಾ ಗ್ರೂಪ್ ಡಿ ಹುದ್ದೆಗೆ ನೇಮಕಗೊಳ್ಳುವ ಸಾಧ್ಯತೆ ಇದೆಯೆನ್ನಲಾಗಿದೆ.