(ನ್ಯೂಸ್ ಕಡಬ) newskadaba.com ನ. 23. ನಮ್ಮ ಬಾಯಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಹೆಬ್ಬಾಗಿಲು. ನಾವು ತಿನ್ನುವ ಆಹಾರ ಬಾಯಿಯ ಮುಖಾಂತರ ಪ್ರವೇಶಿಸಿ ಅನ್ನನಾಳದ ಮುಖಾಂತರ ಹೊಟ್ಟೆಯನ್ನು ಸೇರುತ್ತದೆ. ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ನಮ್ಮ ದೇಹದ ಆರೋಗ್ಯ ಚೆನ್ನಾಗಿರಲು ಸಾಧ್ಯ. ಬಾಯಿಯ ಶುಚಿತ್ವ ಮತ್ತು ದಂತದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಂತ ಕುಂಚ (ಟೂತ್ ಬ್ರಷ್) ಮತ್ತು ದಂತ ಬಳ್ಳಿಯ (ಡೆಂಟಲ್ ಪ್ಲಾಸ್) ಸರಿಯಾದ ಬಳಕೆ ಅತೀ ಅಗತ್ಯ. ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಂತ ಬಳ್ಳಿಯ ಬಳಕೆಯನ್ನು ಹೆಚ್ಚು ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ ತಿಂಗಳ ನಾಲ್ಕನೇ ಶುಕ್ರವಾರವನ್ನು ವಿಶ್ವದಾದ್ಯಂತ ‘ದಂತಬಳ್ಳಿ ಬಳಕೆ ದಿನ ಎಂದು ಆಚರಿಸಲಾಗುತ್ತದೆ. 2000ನೇ ಇಸವಿಯಲ್ಲಿ ಈ ದಂತಬಳ್ಳಿಯ ಬಳಕೆ ದಿನ ಆಚರಣೆಯನ್ನು ಜಾರಿಗೆ ತರಲಾಯಿತು. ವಿವಿಧ ಬಣ್ಣದ ದಂತದಾರ ಮತ್ತು ದಂತಬಳ್ಳಿಯ ಬಳಕೆಯ ವಿಧಾನವನ್ನು ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಆಚರಣೆ ಅತೀ ಅವಶ್ಯಕ. ಒಂದು ಅಂಕಿ ಅಂಶದ ಪ್ರಕಾರ ಶೇಕಡಾ 75 ಮಂದಿ ದಂತ ಕುಂಚ ಬಳಸುತ್ತಿದ್ದರೆ, ಕೇವಲ 30 ಶೇಕಡಾ ಮಂದಿ ದಂತಬಳ್ಳಿ ಬಳಸುತ್ತಿದ್ದಾರೆ. ಇನ್ನಷ್ಟು ಜನರು ದಂತಬಳ್ಳಿ ಬಳಸಿ, ದಂತಾರೋಗ್ಯ ಕಾಪಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ಈ ಆಚರಣೆ ಜಾರಿಗೆ ಬಂದಿದೆ. 1890 ರಲ್ಲಿ ದಂತ ಬಳ್ಳಿಯ ಆವಿಷ್ಕಾರ ನಡೆದು, ದಂತಬಳ್ಳಿಯ ಬಳಕೆ ಆರಂಭವಾಯಿತು. ಜಾನ್ಸಸ್ ಮತ್ತು ಜಾನ್ಸನ್ ಕಂಪೆನಿ 1898ರಲ್ಲಿ ಈ ದಂತಬಳ್ಳಿ ಬಳಕೆಯ ಹಕ್ಕನ್ನು ಕೊಂಡುಕೊಂಡಿತ್ತು. ಆರಂಭದಲ್ಲಿ ಸಿಲ್ಕ್ ನಿಂದ ಈ ದಂತ ಬಳ್ಳಿಯನ್ನು ಮಾಡಲಾಗುತ್ತಿತ್ತು. ಕ್ರಮೇಣ ನೈಲಾನ್ ಬಳಸಲು ಆರಂಭಿಸಲಾಯಿತು. ಮೊದಲೆಲ್ಲ ಬಹಳ ದುಬಾರಿ ದರವಾಗಿದ್ದ ದಂತಬಳ್ಳಿ, ಈಗೀಗ ಬಹಳ ಅಗ್ಗವಾಗಿ ದೊರೆಯುತ್ತದೆ. ದಿನಕ್ಕೊಮ್ಮೆಯಾದರೂ ದಂತ ಬಳ್ಳಿ ಬಳಸಿ, ಹಲ್ಲಿನ ನಡುವೆ ಸಿಕ್ಕಿ ಹಾಕಿಕೊಂಡ ಆಹಾರ ಶುಚಿಗೊಳಿಸಿದಲ್ಲಿ ದಂತಕ್ಷಯವಾಗುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು. ದಂತಬಳ್ಳಿಯ ಬಳಕೆಯನ್ನು ಬಹಳ ಸರಳಗೊಳಿಸಲು ಮತ್ತು ಸುಲಭವಾಗಿಸಲು. ಸಣ್ಣದಾರ ಬಳಸಿ ಎಸೆಯಬಹುದಾದ ಮೇಣ ಸಹಿತ ದಂತಬಳ್ಳಿಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ವಿಪಾರ್ಯಸವೆಂದರೆ 60 ಶೇಕಡಾ ಮಂದಿಗೆ ದಂತಬಳ್ಳಿಯ ಬಳಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು. ಈ ನಿಟ್ಟಿನಲ್ಲಿ ದಂತಬಳ್ಳಿಯ ಬಳಕೆ ದಿನದಂದು ಪ್ರತಿಯೊಬ್ಬರು ದಂತ ವೈದ್ಯರ ಬಳಿ ಹೋಗಿ ದಂತಬಳ್ಳಿಯ ಬಳಕೆ ಬಗ್ಗೆ ಸರಿಯಾದ ಮಾಹಿತಿ ಪಡೆದು, ಹಲ್ಲುಜ್ಜಿದ ಬಳಿಕ ಪ್ರತಿದಿನ ದಂತಬಳ್ಳಿಯ ಬಳಕೆಯನ್ನು ಮಾಡಿದಲ್ಲಿ ನೂರು ವರ್ಷಗಳ ಕಾಲ ಸುಂದರವಾದ ಸುದೃಡವಾದ ಆರೋಗ್ಯವಾದ ದಂತ ಪಂಕ್ತಿಗಳನ್ನು ಪಡೆದು ನಗುನಗುತ್ತಾ ಜೀವನ ನಡೆಸಬಹುದು ಎಂದರೂ ಅತಿಶಯೋಕ್ತಿಯಾಗದು.
ದಂತ ಬಳ್ಳಿ (DENTAL FLOSS)
ಸುಂದರವಾದ ಹಲ್ಲು ಮತ್ತು ಆರೋಗ್ಯದಾಯಕ ವಸಡು ಹೊಂದಲು ದಿನಕ್ಕೊಮ್ಮೆಯಾದರೂ ದಂತಬಳ್ಳಿ ಬಳಸುವುದು ಒಳಿತು.
ಇದರಲ್ಲಿ 2 ವಿಧಗಳಿವೆ.
- ಮೇಣ ರಹಿತ ದಂತಬಳ್ಳಿ (PLAIN DENTAL FLOSS)
- ಮೇಣ ಭರಿತ ದಂತಬಳ್ಳಿ (WAXED DENTAL FLOSS)
ಬಾಯಿ ಮುಕ್ಕಳಿಸುವುದು ಹಲ್ಲುಜ್ಜುವುದು ಮತ್ತು ದಂತ ಬಳ್ಳಿಯ ಬಳಕೆ ಇವೆಲ್ಲಾ ಪ್ರಕ್ರಿಯೆಗಳು ದಂತ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ನಾವು ತಿನ್ನುವ ಆಹಾರ, ಬಾಯಿಯಲ್ಲಿರುವ ಹಲ್ಲುಗಳಿಂದ ಸಣ್ಣ ಸಣ್ಣ ಚೂರುಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಆಹಾರ ಕಣಗಳು ಬಾಯಿಯ ಜೊಲ್ಲುರಸದ ಜೊತೆ ಮಿಶ್ರಿತಗೊಂಡು ಅನ್ನನಾಳವನ್ನು ಪ್ರವೇಶಿಸುತ್ತದೆ. ಆದರೆ ಕೆಲವೊಮ್ಮೆ ನಮ್ಮ ಆಹಾರದ ಅತೀ ಸಣ್ಣ ಕಣಗಳು ಹಲ್ಲುಗಳ ನಡುವಿನ ಸಂಧಿಯಲ್ಲಿ ಹಾಗೆಯೇ ಉಳಿಯುವ ಸಾಧ್ಯತೆ ಇರುತ್ತದೆ. ಹೀಗೆ ಹಲ್ಲುಗಳ ಸಂಧಿಯಲ್ಲಿ ಉಳಿದ ಆಹಾರ ಬಾಯಿಯಲ್ಲಿರುವ ಸೂಕ್ಷ್ಮಾಣು ಜೀವಿಗಳಿಗೆ ಉತ್ತಮ ಆಹಾರವಾಗಿರುತ್ತದೆ. ಇದನ್ನು ತಿಂದ ಸೂಕ್ಷ್ಮಾಣು ಜೀವಿಗಳು, ಆಮ್ಲಗಳನ್ನು ಉತ್ಪಾದಿಸಿ ಹಲ್ಲಿಗೆ ಮತ್ತು ವಸಡಿಗೆ ಹಾನಿ ಉಂಟು ಮಾಡುತ್ತದೆ. ಇದನ್ನು ತಡೆಗಟ್ಟಲು ಪ್ರತಿನಿತ್ಯ ಹಲ್ಲುಜ್ಜುವುದರ ಜೊತೆಗೆ, ದಂತಬಳ್ಳಿಯನ್ನು ಬಳಸಿ “ದಂತ ಪ್ಲಾಸಿಂಗ್” ಮಾಡಲೇಬೇಕು.
ಹಲ್ಲಿನ ನಡುವೆ ಸಿಕ್ಕಿ ಹಾಕಿಕೊಂಡಿರುವ ಆಹಾರ ಪದಾರ್ಥ ಮತ್ತು ದಂತ ಪಾಚಿಯನ್ನು ಎಷ್ಟೇ ಚೆನ್ನಾಗಿ ಹಲ್ಲು ಶುಚಿಗೊಳಿಸಿದರೂ ತೆಗೆಯಲು ಅಸಾಧ್ಯ. ದಂತಕುಂಚದ ಎಳೆಗಳು ಹಲ್ಲುಗಳ ಸಂಧಿಯಲ್ಲಿ ಹೋಗಲು ಅಸಾಧ್ಯ. ಆದ್ದರಿಂದ ತೆಳುವಾದ ನಾಜೂಕಾದ ದಂತ ಬಳ್ಳಿಯನ್ನು ಬಳಸಿ ಬಾಯಿಯನ್ನು ಸ್ವಚ್ಛವಾಗಿಡಬಹುದು. ದಂತ ಪ್ಲಾಸಿಂಗ್ ಎನ್ನುವುದು ತುಂಬಾ ವೈಜ್ಞಾನಿಕವಾದ ಮತ್ತು ಸುರಕ್ಷಿತವಾದ ವಿಧಾನ. ದಿನಕ್ಕೆರಡು ಬಾರಿ ದಂತಬಳ್ಳಿಯನ್ನು ಬಳಸಿ ಮೂರು ನಿಮಿಷಗಳ ಕಾಲ ದಂತ ಪ್ಲಾಸಿಂಗ್ ಮಾಡಿದಲ್ಲಿ ದಂತ ಆರೋಗ್ಯ ವೃದ್ಧಿಸುವುದರಲ್ಲಿ ಖಂಡಿತಾ ಸಂಶಯವೇ ಇಲ್ಲ. ದಂತಕ್ಷಯ ಮತ್ತು ವಸಡಿನ ರೋಗವನ್ನು ತಡೆಗಟ್ಟುವಲ್ಲಿ ‘ದಂತ ಪ್ಲಾಸಿಂಗ್’ ಮಹತ್ತರ ಪಾತ್ರವನ್ನು ವಹಿಸುತ್ತದೆ. ಮೇಣ ಭರಿತದಂತ ಬಳ್ಳಿ ಬಳಸುವುದರಿಂದ ವಸಡು ಮತ್ತು ಹಲ್ಲಿಗೆ ಗಾಯಗಳಾಗುವ ಸಾಧ್ಯತೆ ಕಡಿಮೆ. ದಿನಕ್ಕೊಮ್ಮೆ ದಂತ ಬಳ್ಳಿ ಬಳಸುವುದರಿಂದ ಎರಡು ಹಲ್ಲುಗಳ ನಡುವೆ ಆಹಾರ ಪದಾರ್ಥ ಮತ್ತು ದಂತ ಪಾಚಿ(Plaque) ಸೇರಿಕೊಳ್ಳುವುದನ್ನು ತಡೆಯಬಹುದು. ಎರಡು ಹಲ್ಲುಗಳ ನಡುವೆ ದಂತ ಕುಂಚಗಳಿಂದ ಸರಿಯಾಗಿ ಸ್ವಚ್ಛ ಮಾಡಲು ಕಷ್ಟ. ಹಲವಾರು ಕಂಪನಿಗಳ ದಂತಬಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಉದಾಹರಣೆ:- ಕೋಲ್ಗೇಟ್, ಜಾನ್ಸನ್ ಮತ್ತು ಜಾನ್ಸನ್ ಸಾಮಾನ್ಯವಾಗಿ ದಂತ ಬಳ್ಳಿಯ ಉದ್ದ ಸುಮಾರು 25 ಮೀಟರ್. ಇದು ಸುಮಾರು 3 ತಿಂಗಳಿನವರೆಗೆ ಉಪಯೋಗಿಸಬಹುದು. ಒಮ್ಮೆ ಬಳಸುವಾಗ 15 ರಿಂದ 18 ಇಂಚಿನ ಉದ್ದದ ಬಳ್ಳಿ ಅಗತ್ಯ. ದಂತಬಳ್ಳಿ ಬಳಸುವ ವಿಧಾನವನ್ನು ದಂತ ವೈದ್ಯರ ಬಳಿ ಕೇಳಿ ಕಲಿತುಕೊಂಡರೆ ಉತ್ತಮ. ಈಗ ದಂತಬಳ್ಳಿ ಹಿಡಿ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೊದಮೊದಲು ದಂತಬಳ್ಳಿ ಉಪಯೋಗಿಸುವಾಗ ವಸಡಿನಲ್ಲಿ ರಕ್ತ ಬರುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದಂತ ವೈದ್ಯರ ಸಲಹೆ ತೆಗೆದುಕೊಂಡಲ್ಲಿ ಉತ್ತಮ.
ದಂತ ಬಳ್ಳಿ ಅಥವಾ ದಂತದಾರವನ್ನು ಬಳಸುವ ವಿಧಾನ
- ಕನ್ನಡಿಯ ಮುಂಭಾಗದಲ್ಲಿ ನಿಂತುಕೊಂಡು, 15 ರಿಂದ 18 ಇಂಚು ಉದ್ದದ ದಂತಬಳ್ಳಿಯನ್ನು ಎರಡೂ ಕೈಗಳ ಮಧ್ಯದ ಬೆರಳಿಗೆ ಸುತ್ತಿಕೊಳ್ಳಬೇಕು.
- ಮಧ್ಯದ ಬೆರಳುಗಳ ನಡುವೆ ಎರಡು ಅಥವಾ ಮೂರು ಇಂಚು ದಂತ ಬಳ್ಳ್ಳಿಯನ್ನು ಬಿಟ್ಟು, ಇದನ್ನು ಹಲ್ಲಿನ ಸಂದಿಗಳ ನಡುವೆ ಹಾಕಬೇಕು.
- ಬಿಗಿಯಾಗಿ ದಂತ ಬಳ್ಳಿ ಎಳೆದು ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ ದಂತ ಬಳ್ಳಿಯನ್ನು ಮೇಲೆ ಕೆಳಗೆ ಚಲಿಸುತ್ತಾ ಹಲ್ಲುಗಳ ನಡುವಿನ ಸಂಧಿಯಲ್ಲಿ ತೂರಿಸಬೇಕು.
- ನಿಧಾನವಾಗಿ ಜಾಗರೂಕತೆಯಿಂದ ಹಿತಮಿತವಾದ ಶಕ್ತಿ ಬಳಸಿ ದಂತ ಬಳ್ಳಿಯನ್ನು ಮೇಲೆ-ಕೆಳಗೆ ಚಲಿಸಬೇಕು. ಅಗತ್ಯಕ್ಕಿಂತ ಜಾಸ್ತಿ ಶಕ್ತಿ ಬಳಸಿದಲ್ಲಿ ವಸಡಿಗೆ ನೋವಾಗಿ, ರಕ್ತ ಒಸರಬಹುದು.
- ಹಲ್ಲಿನ ಬುಡದ ತನಕ ದಂತದಾರ ಹೋದ ಬಳಿಕ, ವಸಡಿನ ಕೆಳಗೂ ದಂತ ಬಳ್ಳಿ ನಿಧಾನವಾಗಿ ಚಲಿಸಬೇಕು.
- ಹಲ್ಲ್ಲುಗಳ ನಡುವೆ ಹಿಂದೆ-ಮುಂದೆ, ವೃತ್ತಾಕಾರದಲ್ಲಿ ದಂತ ಬಳ್ಳಿಯನ್ನು ಚಲಿಸಬೇಕು.
- ಹಲ್ಲು ಮತ್ತು ನಡುವಿನ ಸಂದಿ ಚೊಕ್ಕವಾದ ನಂತರ ದಂತ ಬಳ್ಳಿಯನ್ನು ನಿಧಾನವಾಗಿ ಮೇಲಕ್ಕೆ ತೆಗೆಯಬೇಕು.
- ಒಮ್ಮೆ ಉಪಯೋಗಿಸಿದ ದಂತ ಬಳ್ಳಿಯನ್ನು ಮತ್ತೊಂದು ಜಾಗಕ್ಕೆ ಉಪಯೋಗಿಸಬಾರದು.
- ಎರಡು ಹಲ್ಲುಗಳ ನಡುವೆ ದಂತದಾರ ತುಂಡಾದರೆ ಅದು ಅಲ್ಲಿಯೇ ಇರದಂತೆ ನೋಡಿಕೊಳ್ಳಬೇಕು.
- ಒಂದು ಬದಿಯಿಂದ, ಮೇಲ್ದವಡೆ ಹಲ್ಲುಗಳಿಂದ ಆರಂಭಿಸಿ, ಕ್ರಮವಾಗಿ ಎಲ್ಲಾ ಹಲ್ಲುಗಳ ಸಂದಿಯ ನಡುವೆ ಮತ್ತು ಕೊನೆಯ ಹಲ್ಲಿನ ಹಿಂಭಾಗದಲ್ಲಿ ದಂತಬಳ್ಳಿ ಹಾಕಬೇಕು.
- ಎರಡು ಹಲ್ಲುಗಳ ನಡುವೆ ಬಿಗಿಯಾಗಿ ಸಂಪರ್ಕವಿದ್ದಲ್ಲಿ, ಮೇಣ ಮಿಶ್ರಿತ ದಂತ ಬಳ್ಳಿಯನ್ನು ಉಪಯೋಗಿಸುವುದು ಉಚಿತ. ಮೇಣ ಮಿಶ್ರಿತ ದಂತಬಳ್ಳಿ ಹಲ್ಲುಗಳ ಸಂಧಿಯಲ್ಲಿ ಸುಲಭವಾಗಿ ಜಾರುತ್ತದೆ.
- ಬೆರಳುಗಳಿಗೆ ಸುತ್ತಿ ದಂತಬಳ್ಳಿ ಬಳಸಲು ಕಷ್ಟವೆನಿಸಿದರೆ, ವಿಶೇಷ ದಂತಬಳ್ಳಿ ಹಿಡಿಕೆಯನ್ನು ಬಳಸಬಹುದು. ಇದೀಗ ಮಾರುಕಟ್ಟೆಯಲ್ಲಿ ರೇಡಿಮೇಡ್ ದಂತ ಹಿಡಿಕೆಯಿರುವ ದಂತ ಬಳ್ಳಿಯೂ ಲಭ್ಯವಿದೆ. ಇದನ್ನು ಒಮ್ಮೆ ಬಳಸಿ ಬಳಿಕ ವಿಸರ್ಜಿಸಬಹುದು.
- ಮೊದ ಮೊದಲು ದಂತ ಬಳ್ಳಿ ಬಳಸುವಾಗ ನೋವು ಮತ್ತು ರಕ್ತಸ್ರಾವ ಆಗಬಹುದು ಒಂದು ವಾರದಲ್ಲಿ ಕೈ ಕುದುರಿ ಬಳಕೆ ಸುಲಭವಾಗುತ್ತದೆ. ದಂತ ಬಳ್ಳಿ ಬಳಸುವ ಪ್ರಕ್ರಿಯೆಗೆ ತಗಲುವ ಸಮಯ ಮೂರು ನಿಮಿಷ ಮಾತ್ರ. ಸ್ವಸ್ಥ ಮತ್ತು ಸುಂದರ ದಂತ ಪಂಕ್ತಿಗಳಿಗಾಗಿ ದಂತ ಬಳ್ಳಿಯ ಬಳಕೆಯನ್ನು ಎಲ್ಲರೂ ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿದಲ್ಲಿ ಉತ್ತಮ.
ಡಾ|| ಮುರಲೀ ಮೋಹನ್ ಚೂಂತಾರು